ಬೆಂಗಳೂರು: ಸಿದ್ದರಾಮಯ್ಯ ನಂತರ ಡಿಸಿಎಂ ಡಿಕೆಶಿ ಅವರು ಮುಖ್ಯಮಂತಿ ಆಗುತ್ತಾರೆ ಎಂದು ಮಾಗಡಿ ಶಾಸಕ ಬಾಲಕೃಷ್ಣ ಹೇಳಿದರು. ಶಾಸಕಾಂಗ ಪಕ್ಷದ ಸಭೆ ಹಿನ್ನೆಲೆ ಪವರ್ ಶೇರಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಶಾಸಕರು ಚರ್ಚೆ ಮಾಡುತ್ತಿಲ್ಲ, ಆದರೆ ಮಾಧ್ಯಮಗಳಲ್ಲಿ ಚರ್ಚೆ ಆಗುತ್ತಿದೆ. ಸಿಎಂ ಸಿದ್ದರಾಮಯ್ಯ ನಂತರ ಡಿಸಿಎಂ ಡಿ.ಕೆ ಶಿವಕುಮಾರ್ ಆವರು ಸಿಎಂ ಆಗುತ್ತಾರೆ, ಸಿದ್ದರಾಮಯ್ಯ ನಂತರ ಅವರೇ ಆಗಬೇಕಲ್ವಾ, ಮುಖ್ಯಮಂತ್ರಿ ಅಭ್ಯರ್ಥಿ ಬೇರೆ ಯಾರಿದ್ದಾರೆ, ಆದ್ರೆ ಈ ಅವಧಿಯಲ್ಲೇ ಆಗ್ತಾರ ಅನ್ನೋದನ್ನ ಹೈಕಮಾಂಡ್ ತೀರ್ಮಾನ ಮಾಡುತ್ತೆ ಅಂತ ಪ್ರಶ್ನೆ ಮಾಡಿದರು. ಒಕ್ಕಲಿಗರ ಸಂಘದಿಂದ ಡಿ.ಕೆ ಶಿವಕುಮಾರ್ ಸಿಎಂ ಮಾಡಲು ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರೊ ಹೇಳಿದ್ರು ಅಂದ ಮಾತ್ರಕ್ಕೆ ಹೇಳಿದವರನ್ನೆಲ್ಲಾ ಮುಖ್ಯಮಂತಿ ಮಾಡೋದಕ್ಕೆ ಆಗುವುದಿಲ್ಲ. ಅವರು ಜಾತಿ ಅಭಿಮಾನದಿಂದ ಹೇಳಿದ್ದಾರೆ. ಈ ಕುರಿತು ಹೈಕಮಾಂಡ್ ನಾಯಕರು ಅಂತಿಮ ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದರು.










