ತುಮಕೂರು: ತೆಂಗಿನಕಾಯಿ ಫ್ಯಾಕ್ಟರಿಯಲ್ಲಿ ತೆಂಗಿನಕಾಯಿಯ ನೀರಿನ ತ್ಯಾಜ್ಯ ಸಂಗ್ರಹವಾಗುವ ಗುಂಡಿಯಲ್ಲಿ ಎರಡು ವರ್ಷದ ಮಗುವೊಂದು ಬಿದ್ದು ಮೃತಪಟ್ಟಿದ ದುರಂತ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಮೀಸೆತಿಮ್ಮನಹಳ್ಳಿ ಬಳಿ ಇರುವ ಮಾನ್ಯಶ್ರೀ ಕೋಕನೆಟ್ ಫ್ಯಾಕ್ಟರಿಯಲ್ಲಿ ನಡೆದಿದೆ. ಇಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರ 2 ವರ್ಷದ ಹೆಣ್ಣು ಮಗು ಕಾರ್ಖಾನೆಯ ಗುಂಡಿಗೆ ಬಿದ್ದು ಸಾವನ್ನಪ್ಪಿದೆ. ಬಿಹಾರ ಮೂಲದ ತಂದೆ ಹರೀಂದ್ರಕುಮಾರ್ ಮತ್ತು ತಾಯಿ ರೀನಾದೇವಿ ಪುತ್ರಿ ಕುಸುಮ ಕುಮಾರಿ ಮೃತಪಟ್ಟಿರುವ ದುರ್ದೈವಿ. ಘಟನೆ ಸಂಬಂಧ ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿನ್ನೆ 2 ಗಂಟೆ ಸುಮಾರಿಗೆ ಆಟವಾಡುತ್ತಿದ್ದ ಮಗು ಕಾಣದೇ ಇದ್ದಾಗ ಪೋಷಕರು ಹುಡುಕಾಟ ನಡೆಸಿದ ಸಂದರ್ಭ ಗುಂಡಿ ಒಳಗೆ ಬಿದ್ದಿರುವುದನ್ನು ಗಮನಿಸಿ ಮಗುವನ್ನು ಮೇಲೆ ಎತ್ತಲಾಗಿದೆ. ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿದೆ.










