ಬೆಂಗಳೂರು: ಕರ್ನಾಟಕದ ಯುವಕರಿಗೆ ಸಿಹಿ ಸುದ್ದಿ ದೊರೆತಿದ್ದು, ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಆಟೋಮೋಟಿವ್ ಟೆಕ್ನಾಲಜಿ ಕೇಂದ್ರ-ಐಕ್ಯಾಟ್ 3ನೇ ಕೇಂದ್ರ ಸ್ಥಾಪನೆಯಾಗಲಿದೆ ಎಂದು ಕೇಂದ್ರ ಕೈಗಾರಿಕಾ ಸಚಿವ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು. ಬೆಂಗಳೂರಿನಲ್ಲಿ ಐಕ್ಯಾಟ್ ಕೇಂದ್ರ ಆರಂಭ ಮಾಡುವ ಕುರಿತು ಪ್ರಕ್ರಿಯೆಗಳನ್ನು ಶುರುಮಾಡುವುದಾಗಿ ಭರವಸೆ ನೀಡಿದರು. ನಾವೀನ್ಯತೆ, ಆವಿಷ್ಕಾರ ಹಾಗೂ ಉದ್ಯಮಶೀಲತೆಯಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ. ಆಟೋಮೊಬೈಲ್ ಕ್ಷೇತ್ರದ ಹಬ್ ಆಗಿಯೂ ಬೆಳೆಯುತ್ತಿದೆ. ಬೆಂಗಳೂರಿನಲ್ಲಿ ಐಕ್ಯಾಟ್ ಸ್ಥಾಪನೆ ಮಾಡುವುದರಿಂದ ಎಲೆಕ್ಟ್ರಿಕ್ ವಾಹನ ತಂತ್ರಜ್ಞಾನ, ಸಾಫ್ಟ್‍ವೇರ್ ನಿಯಂತ್ರಿತ ವಾಹನಗಳು, ಸ್ವಯತ್ತ ವ್ಯವಸ್ಥೆಗಳು ಮತ್ತು ದತ್ತಾಂಶ ಸುರಕ್ಷತೆಯ ದೃಷ್ಟಿಯಲ್ಲಿ ಐಕ್ಯಾಟ್ ಕೇಂದ್ರವು ನಿರ್ಣಾಯಕವಾಗಿ ಕೆಲಸ ಮಾಡುತ್ತದೆ. ಆಟೋಮೊಬೈಲ್ ಆವಿಷ್ಕಾರಕ್ಕೆ ಉತ್ತೇಜನ ದೊರೆಯಲಿದೆ ಮತ್ತು ಐಕ್ಯಾಟ್ ಸ್ಥಾಪನೆಯಿಂದ ಮುಂದಿನ ಪೀಳಿಗೆಗೆ ಆಟೋಮೊಬೈಲ್ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಕ್ಕೆ ಹೆಚ್ಚು ಉತ್ತೇಜನ ದೊರೆಯಲಿದೆ ಎಂದು ತಿಳಿಸಿದರು. ಬೆಂಗಳೂರಿನಲ್ಲಿ ಐಕ್ಯಾಟ್ ಕೇಂದ್ರ ಸ್ಥಾಪನೆ ಮಾಡುವುದರಿಂದ ಅಕ್ಕಪಕ್ಕದ ರಾಜ್ಯಗಳಿಗೂ ಅನುಕೂಲವಾಗಿದೆ ಎಂದರು.










