ಚಾರ್ಮಾಡಿ ಘಾಟಿಯಲ್ಲಿ ಭೀಕರ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯ ನಾಶ.

33

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಭಾರೀ ಪ್ರಮಾಣದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ನೂರಾರು ಎಕರೆ ಅರಣ್ಯ, ಅಪರೂಪದ ಶೋಲಾ ಕಾಡು ಸುಟ್ಟು ಭಸ್ಮವಾಗಿದೆ. ಗಾಳಿಯ ವೇಗಕ್ಕೆ ಬೆಂಕಿ ಹೆಚ್ಚುತ್ತಲಿದ್ದು, ಇನ್ನಷ್ಟು ಪ್ರದೇಶಕ್ಕೆ ವ್ಯಾಪಿಸುತ್ತಿದೆ. ಚಾರ್ಮಾಡಿ ಘಾಟಿಯ ಅಣ್ಣಪ್ಪ ಸ್ವಾಮಿ ದೇವಾಲಯದ ಬಳಿ ಅರಣ್ಯಕ್ಕೆ ಭಾರೀ ಪ್ರಮಾಣದಲ್ಲಿ ಕಾಡ್ಗಿಚ್ಚು ಆವರಿಸಿದ್ದು, ನೂರಾರು ಎಕರೆ ಅರಣ್ಯ ಬೆಂಕಿಗೆ ಆಹುತಿಯಾಗಿದೆ. ಕಳೆದ ವಾರವಷ್ಟೆ ಅದೇ ಚಾರ್ಮಾಡಿ ಘಾಟಿಯ ಬಿದಿರುತಳ ತಪ್ಪಲಿನ ಕಾಡಿನಲ್ಲಿ ಕಾಡ್ಗಿಚ್ಚಿಗೆ ಅರಣ್ಯ ಹಾಗೂ ಪ್ರಾಣಿ ಸಂಕುಲ ನಾಶವಾಗಿತ್ತು. 500ಕ್ಕೂ ಅಧಿಕ ಅರಣ್ಯ ಪ್ರದೇಶ ಕಾಡ್ಗಿಚ್ಚಿಗೆ ಭಸ್ಮವಾಗಿತ್ತು. ಇದೀಗ ಕಳೆದ ರಾತ್ರಿ ಮತ್ತೆ ಚಾರ್ಮಾಡಿ ತಪ್ಪಲಿನ ಅರಣ್ಯಕ್ಕೆ ಬೆಂಕಿ ಬಿದ್ದು ಮತ್ತೆ ನೂರಾರು ಎಕರೆ ಅರಣ್ಯ ಪ್ರದೇಶ ಕಾಡ್ಗಿಚ್ಚಿಗೆ ಭಸ್ಮವಾಗಿದೆ. ಕಾಡ್ಗಿಚ್ಚು ನಿಯಂತ್ರಿಸಲು ಅರಣ್ಯ ಇಲಾಖೆ, ಅಗ್ನಿಶಾಮಕ ದಳದ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.