ಅರವಿಂದ್ ಕೇಜ್ರಿವಾಲ್‍ಗೆ ಸೋಲು, ಎಎಪಿ ವರಿಷ್ಠಗೆ ಭಾರೀ ಮುಖಭಂಗ.

24

ನವದೆಹಲಿ: ದೆಹಲಿ ವಿಧಾನಸಭಾ ಕ್ಷೇತ್ರದ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದೆ. ಆಮ್ ಆದ್ಮಿ ಪಕ್ಷದ ವರಿಷ್ಠ, ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‍ಗೆ ವಿಧಾನಸಭೆ ಚುನಾವಣೆಯಲ್ಲಿ ಸೋಲಾಗಿದೆ. ಇದರೊಂದಿಗೆ ಆಡಳಿತಾರೂಢ ಎಎಪಿಗೆ ಹಾಗೂ ಕೇಜ್ರಿವಾಲ್‍ಗೆ ಭಾರೀ ಮುಖಭಂಗವಾದಂತಾಗಿದೆ. ಸತತ ಎರಡು ಬಾರಿ ದೆಹಲಿಯ ಗದ್ದುಗೆ ಏರಿದ್ದ ಎಎಪಿ ಮತ್ತು ಕೇಜ್ರಿವಾಲ್‍ಗೆ ಈ ಬಾರಿ ಅಬಕಾರಿ ನೀತಿ ಹಗರಣದಿಂದ ಭಾರಿ ಹಿನ್ನಡೆಯಾಗಿತ್ತು. ಅದು ಮತದಾನದ ಮೇಲೂ ಪರಿಣಾಮ ಬೀರಿದಂತಿದೆ. ಅರವಿಂದ ಕೇಜ್ರಿವಾಲ್ ಅವರಿಗೆ ನವದೆಹಲಿ ಕ್ಷೇತ್ರದಲ್ಲಿ ಬಿಜೆಪಿಯ ಪರ್ವೇಶ್ ವರ್ಮಾ ವಿರುದ್ಧ ಸೋಲಾಗಿದೆ. ಇಬ್ಬರ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿತ್ತು, ಕೆಲವೇ ಕೆಲವು ಮತಗಳ ಅಂತರದಲ್ಲಿ ಅರವಿಂದ್ ಕ್ರೇಜಿವಾಲ್ ಸೋತ್ತಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷವು ಭ್ರಷ್ಟಾಚಾರ ವಿರೋಧಿ ಚಳವಳಿಯಿಂದ ಹೊರಹೊಮ್ಮಿತ್ತು. ಆದರೆ ಕೇವಲ ಹತ್ತು ವರ್ಷಗಳ ನಂತರ, ಪಕ್ಷದ ಉನ್ನತ ನಾಯಕರ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪಗಳು ಕೇಳಿಬಂದವು. ಮದ್ಯ ಹಗರಣದಲ್ಲಿ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಜೈಲಿಗೆ ಹೋಗಬೇಕಾಯಿತು. ತಮ್ಮ ವಿರುದ್ಧ ಕೇಳಿಬಂದ ಗಂಭೀರ ಆರೋಪಗಳನ್ನು ಸುಳ್ಳೆಂದು ಪ್ರಬಲವಾಗಿ ಮುಂದಿಡುವಲ್ಲಿ ಅವರು ವಿಫಲವಾಗಿದ್ದರಿಂದ ಸೋಲಿಗೆ ಪ್ರಮುಖ ಕಾರಣವಾಯಿತು ಎಂದು ಹೇಳಲಾಗುತ್ತಿದೆ.