ಕಾಂಗ್ರೆಸ್ ಸರ್ಕಾರವೊಂದು ದೊಡ್ಡ ನಾಟಕದ ಕಂಪನಿ: ಸಂಸದ ಗೋವಿಂದ ಕಾರಜೋಳ ಕಿಡಿ.

38

ಚಿತ್ರದುರ್ಗ: ಕಾಂಗ್ರೆಸ್ ಸರ್ಕಾರವೊಂದು ದೊಡ್ಡಾಟ ಹಾಗೂ ಬಯಲಾಟ ಆಡುವ ನಾಟಕದ ಕಂಪನಿ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಹೇಳಿದರು. ಚಿತ್ರದುರ್ಗದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‍ನಿಂದ ರಾಜ್ಯದಲ್ಲಿ ದಲಿತ ಸಮಾವೇಶ ನಡೆಸಲು ಭರದ ಸಿದ್ಧತೆ ವಿಚಾರವಾಗಿ ಪ್ರತಿಕ್ರಿಯಿಸಿದರು. ದೇಶಕ್ಕೆ ಸ್ವಾತಂತ್ರ್ಯ ಬಂದನಂತರ 70 ವರ್ಷದಲ್ಲಿ 60 ವರ್ಷ ಕಾಂಗ್ರೆಸ್ ಅಧಿಕಾರ ಚಲಾಯಿಸಿದೆ. ಕಾಂಗ್ರೆಸ್ ಆಡಳಿತದಲ್ಲಿ ಇಂಥ ಗಿಮಿಕ್ ಬಹಳ ಮಾಡಿದ್ದಾರೆ. ಅವರಿಗೆ ಕುರ್ಚಿಕಂಟಕ ಬಂದಾಗ, ಪಕ್ಷದಿಂದ ಜನ ದೂರವಾದಾಗ, ಮತದಾರರು ಅವರನ್ನು ತಿರಸ್ಕರಿಸಿದಾಗ ಹೊಸ ನಾಟಕ ಶುರು ಮಾಡುತ್ತಾರೆ. ಹೀಗಾಗಿ ಈ ಸರ್ಕಾರ ಬಯಲಾಟ ಹಾಗೂ ದೊಡ್ಡಾಟ ಆಡುವ ದೊಡ್ದ ನಾಟಕ ಕಂಪನಿ ಎನಿಸಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ಹಿಂದೆ ನಾಟಕ ಆಡಲು ಹೆಚ್ಚು ಬೆಳಕು ಇರುತ್ತಿರಲಿಲ್ಲ. ಆಗ ಕಲಾವಿದರು ಕಂದಿಲ್ ಬೆಳಕಲ್ಲಿ ನಾಟಕ ನಡೆಸುತಿದ್ದರು. ಅಂತೆಯೇ ಈ ಕಾಂಗ್ರೆಸ್ ಸರ್ಕಾರವೊಂದು ದೊಡ್ಡ ನಾಟಕದ ಕಂಪನಿ. ಈಗ ಜನರಿಗೆ ಕಾಂಗ್ರೆಸ್ಸಿಗರ ಬಂಡವಾಳ ಅರ್ಥ ಆಗಿದೆ. ಅವರಿಗೆ ಅಷ್ಟೊಂದು ದಲಿತರ ಮೇಲೆ ಕಾಳಜಿಯಿದ್ದರೆ ದಲಿತರ 25 ಸಾವಿರ ಕೋಟಿ ಎಸ್ಸಿಪಿಟಿಎಸ್ ದುರುಪಯೋಗ ಮಾಡಿಕೊಳ್ಳುತ್ತಿರಲಿಲ್ಲ. ದಲಿತರ ಹಣಕ್ಕೆ ಕತ್ತರಿ ಹಾಕಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.