ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಗ್ರಹ.

73

ಬೆಂಗಳೂರು: ರಾಜ್ಯದಲ್ಲಿ ಪರಿಸ್ಥಿತಿ ಕೆಟ್ಟ ಮಟ್ಟ ತಲುಪಿದೆ. ಆದರೆ, ರಾಜ್ಯದ ಹಣಕಾಸಿನ ಸ್ಥಿತಿ ಸುಸ್ಥಿತಿಯಲ್ಲಿದೆ. ಆಲ್ ಇಸ್ ವೆಲ್ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳುತ್ತಿದ್ದಾರೆ. ಈ ರೀತಿ ಹೇಳುವುದನ್ನು ಬದಿಗಿಟ್ಟು, ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ. ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಇಂದು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊಟ್ಟ ಗ್ಯಾರಂಟಿ ಜೊತೆಗೆ ಪ್ರಣಾಳಿಕೆಯ ಭರವಸೆ ಈಡೇರಿಸದ ನೀವು ಈಗ ಹೊಸದಾಗಿ ಹೊಸ ಭರವಸೆ ಕೊಡಲು ಹೊರಟಿದ್ದೀರಾ. ಈ ರಾಜ್ಯದ ಜನರನ್ನು ನೀವು ಬಿಕ್ಷುಕರು ಎಂದುಕೊಂಡಿರಾ? ಎಂದು ವಾಗ್ದಾಳಿ ನಡೆಸಿದ್ದಾರೆ.
ಕಳೆದ ಐದಾರು ತಿಂಗಳಿಂದ ಗೃಹಲಕ್ಷ್ಮಿ ಯೋಜನೆ ಹಣ ಸಿಗುತ್ತಿಲ್ಲ. ಅಕ್ಕಿ ಬದಲು ನೀಡುತ್ತಿದ್ದ ಹಣ ಕೊಡಲು ಆಗುತ್ತಿಲ್ಲ. ಕೇಂದ್ರ ಸರ್ಕಾರ ಅಕ್ಕಿಯನ್ನು 22 ರೂ.ಗೆ ಕೊಡಲು ಸಿದ್ಧ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಆದರೆ ಅದನ್ನು ಖರೀದಿಸಲು ರಾಜ್ಯ ಸರ್ಕಾರ ಮುಂದೆ ಬರುತ್ತಿಲ್ಲ. ಸಾರಿಗೆ ಇಲಾಖೆಗೆ ಶಕ್ತಿ ಯೋಜನೆಯ 7 ಸಾವಿರ ಕೋಟಿ ರೂಪಾಯಿ ಬಾಕಿಯನ್ನು ರಾಜ್ಯ ಸರ್ಕಾರ ನೀಡಬೇಕಿದೆ. ರಾಜ್ಯ ಸಾರಿಗೆ ಇಲಾಖೆ ಬಾಗಿಲು ಮುಚ್ಚುವ ಹಂತಕ್ಕೆ ಬಂದಿದೆ ಎಂದು ಆರೋಪಿಸಿದರು. ವಿದ್ಯುತ್ ಇಲಾಖೆಗೆ ವಿವಿಧ ಇಲಾಖೆಗಳಿಂದ 6 ಸಾವಿರ ಕೋಟಿ ರೂಪಾಯಿ ಬಾಕಿ ಇದೆ ಎಂದು ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ. ರಾಜ್ಯ ಸರ್ಕಾರದ ಆಗ್ರಹದ ಮೇರೆಗೆ ಮೆಟ್ರೋ ದರ ಹೆಚ್ಚಾಗಿದೆ. ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಈ ತಂತ್ರ ಮಾಡುತ್ತಿದೆ. ಎಸ್‍ಸಿಪಿ-ಟಿಎಸ್‍ಪಿ ಹಣ ದುರುಪಯೋಗ ಆಗಿದೆ. ಅದು ಗ್ಯಾರಂಟಿಗೆ ಬಳಕೆ ಆಗಿದೆ. ಆ ಸಮುದಾಯದ ಮುಖಂಡರು ಮುಖ್ಯಮಂತ್ರಿ ಭೇಟಿ ಮಾಡಿ ಮನವಿ ಮಾಡಿದ್ದಾರೆ ಎಂದು ತಿಳಿಸಿದರು.