ಡಿಕೆಶಿ ವಿರುದ್ಧ 2000 ಕೋಟಿ ರೂ. ಭ್ರಷ್ಟಾಚಾರ ಆರೋಪ; ಸಿಬಿಐಗೆ ಮುನಿರತ್ನ ದೂರು.

38

ಬೆಂಗಳೂರು: ಬೆಂಗಳೂರು ನಗರಾಭಿವೃದ್ಧಿ ಇಲಾಖೆಯಲ್ಲಿ 2000 ಕೋಟಿ ರೂಪಾಯಿ ಭ್ರಷ್ಟಾಚಾರವಾಗಿದೆ ಎಂದು ಮಾಜಿ ಸಚಿವ ಮುನಿರತ್ನ ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರು ಅಭಿವೃದ್ಧಿ ಸಚಿವರಾಗಿರುವ ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ತನಿಖೆ ನಡೆಸುವಂತೆ ಲೋಕಾಯುಕ್ತ, ಸಿಬಿಐ, ಇಡಿಗೆ ದೂರು ನೀಡಿದ್ದಾರೆ.
ಆಂಧ್ರದ ಜೆಎಂಸಿ ಕನ್ಸ್ಟ್ರಕ್ಷನ್‍ಗೆ 1768 ಕೋಟಿ ಪ್ಯಾಕೇಜ್‍ನ ಕಾರ್ಯಾದೇಶ ನೀಡಲು ತಯಾರಿ ನಡೆದಿದೆ. ಇದಕ್ಕಾಗಿ 15 ಪರ್ಸೆಂಟ್ ಕಮಿಷನ್ ಅನ್ನು ಗುತ್ತಿಗೆದಾರರು, ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ಮೂಲಕ ಮುಂಗಡ ನೀಡಿದ್ದಾರೆ. ಇದ್ರಲ್ಲಿ ನೇರ ಪಾತ್ರ ಇರೋದು ಡಿಸಿಎಂ ಡಿ.ಕೆ ಶಿವಕುಮಾರ್, ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರದ್ದು ಎಂದು ಮುನಿರತ್ನ ದೂರಿದ್ದಾರೆ.
ಕೂಡಲೇ ಈ ಅಕ್ರಮ ತಡೆಯಿರಿ ಎಂದು ಕೋರಿದ್ದಾರೆ. ಅಷ್ಟೇ ಅಲ್ಲ, ಕೇವಲ 5 ವಾರ್ಡ್ ಹೊಂದಿರುವ ಯಶವಂತಪುರಕ್ಕೆ 232 ಕೋಟಿ ಹಂಚಿಕೆ ಮಾಡಲಾಗಿದೆ. ಕಾಂಗ್ರೆಸ್ ಮುಖಂಡ ಸ್ಟಾರ್ ಚಂದ್ರು ಮಾಲೀಕತ್ವದ ಸ್ಟಾರ್ ಬಿಲ್ಡರ್ಸ್ ಕಂಪನಿಗೆ 232 ಕೋಟಿ ಮೊತ್ತದ ಟೆಂಡರ್ ನೀಡಲು ತಯಾರಿ ನಡೆದಿದೆ ಎಂದು ಆಪಾದಿಸಿದ್ದಾರೆ. ಕಾಮಗಾರಿಗಳ ಗುತ್ತಿಗೆ ನೀಡಿಕೆ ಸ್ಥಳೀಯ ಗುತ್ತಿಗೆದಾರರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಇದರಿಂದ ನಮ್ಮ ರಾಜ್ಯದ ಗುತ್ತಿಗೆದಾರರು ಬೇರೆ ರಾಜ್ಯದ ಶ್ರೀಮಂತ ಗುತ್ತಿಗೆದಾರರ ಗುಲಾಮರಾಗುತ್ತಿದ್ದಾರೆ ಎಂದು ಮುನಿರತ್ನ ಆಕ್ರೋಶ ವ್ಯಕ್ತಪಡಿಸಿದ್ದಾರೆ.