ಚೆನ್ನೈ : ಟ್ರಕ್ ಹಾಗೂ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ 19 ಮಂದಿ ಮೃತಪಟ್ಟಿರುವ ಘಟನೆ ತಮಿಳುನಾಡಿನ ತಿರುಪುರ್ ಜಿಲ್ಲೆಯ ಅವಿನಾಶಿಯಲ್ಲಿ ನಡೆದಿದೆ. ಕೇರಳಕ್ಕೆ ಸೇರಿದ ಓಲ್ವೋ ಬಸ್ ಬೆಂಗಳೂರಿನಿಂದ ತಿರುವನಂತಪುರದ ಕಡೆಗೆ ತೆರಳುತ್ತಿದ್ದ ವೇಳೆ ಕೊಯಮತ್ತೂರು-ಸೇಲಂ ಹೆದ್ದಾರಿಯಲ್ಲಿ ಎದುರಿನಿಂದ ವೇಗವಾಗಿ ಬರುತ್ತಿದ್ದ ಟ್ರಕ್ ಬಸ್‍ಗೆ ಡಿಕ್ಕಿ ಹೊಡೆದ ಪರಿಣಾಮ 14 ಮಂದಿ ಪುರುಷರು ಹಾಗೂ 5 ಮಂದಿ ಮಹಿಳೆಯರು ಸೇರಿದಂತೆ 19 ಮಂದಿ ಮೃತಪಟ್ಟಿದ್ದು, 23 ಮಂದಿ ಪ್ರಯಾಣಿಕರಿಗೆ ಗಂಭೀರ ಗಾಯವಾಗಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಗಾಯಾಳುಗಳನ್ನು ಅವಿನಾಶಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಟ್ರಕ್ ಚಾಲಕ ನಿಯಮವನ್ನು ಉಲ್ಲಂಘಿಸಿ ತಪ್ಪಾದ ಹಾದಿಯಲ್ಲಿ ಟ್ರಕ್‍ನ್ನು ಚಲಾಯಿಸಿದ್ದೇ ಘಟನೆಗೆ ಕಾರಣ ಎನ್ನಲಾಗಿದ್ದು, ಘಟನೆ ಸಂಭವಿಸುತ್ತಿದ್ದಂತೆ ಟ್ರಕ್ ಚಾಲಕ ಪರಾರಿಯಾಗಿದ್ದು, ಚಾಲಕನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಈ ಭೀಕರ ಅಪಘಾತದ ಮಾಹಿತಿಯನ್ನು ತಿಳಿದ ಕೇರಳದ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರು, ತಮಿಳುನಾಡು ಸರ್ಕಾರ ಹಾಗೂ ತಿರುಪುರ್ ಜಿಲ್ಲಾಧಿಕಾರಿಗಳ ಸಹಕಾರದೊಂದಿಗೆ ಮೃತರ ಕುಟುಂಬಸ್ಥರಿಗೆ ಎಲ್ಲಾ ಪರಿಹಾರ ಕ್ರಮಗಳನ್ನು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.










