ಭಾಗ – 2
ಡಾ.ಎಂ.ಎಸ್.ಮಣಿ
ಇನ್ನು ೭ ಜನ ಆದಿವಾಸಿಗಳು ರೂ.೨ ಕ್ಕೆ ಅಕ್ಕಿ ದೊರೆಯದಿದ್ದರಿಂದ ಜಂಗಲ್ ಮಹಲ್ ಪ್ರದೇಶದಲ್ಲಿ ಅಸು ನೀಗಿದ್ದಾರೆ. ಇದು ಡೈಮಂಡ್ ಹಾರ್ಬರ್ ಶಾಸಕ ನಡೆಸಿದ ವಿಚಾರಣೆಯಲ್ಲಿ ತಿಳಿದುಬಂದಿದೆ. ಜಂಗಲ್ ಮಹಲ್ನಲ್ಲಿ ೨೦೦೭ ರಲ್ಲಿ ’ಆಹಾರ ದಂಗೆ’ ಕೂಡ ನಡೆದಿತ್ತು. ಆಹಾರ ಅಸಮರ್ಪಕ ಹಂಚಿಕೆ ಕುರಿತಂತೆ ನ್ಯಾಯಯುತ ತನಿಖೆ ನಡೆಯಬೇಕು. ಆಮ್ಲಸೋಲೆ ದುರ್ಘಟನೆ ಬಂಗಾಲ್ನ ’ಸಾಮಾಜಿಕ ಇತಿಹಾಸ’ ವನ್ನು ತೋರಿಸುತ್ತದೆ. ಇಲ್ಲಿ ಪಡಿತರ ಚೀಟಿ ಮೂಲಕ ವಿತರಿಸುವ ಆಹಾರಧಾನ್ಯವೊಂದೇ ಸಾಕೇ? ಎಂಬ ಪ್ರಶ್ನೆಯೂ ಇದೆ. ಬಡ ಜನರಿಗೆ ವಿತರಿಸಬೇಕಾದ ಆಹಾರವನ್ನು ಕಳ್ಳಮಾರ್ಗದ ಮೂಲಕ ಸಾಧಿಸುವುದನ್ನು ಮಟ್ಟ ಹಾಕಬೇಕಿದೆ. ಹಿಂದೆ ಹಾಸನದಲ್ಲೂ ಅಕ್ಕಿ ಕಳುವಾಗಿತ್ತು.
ಇದಕ್ಕಿಂತಲೂ ಭೀಕರವಾಗಿ ಕಾಡುವುದು ದಕ್ಷಿಣ ತಮಿಳುನಾಡಿನಲ್ಲಿ ಆಚರಣೆಯಲ್ಲಿರುವ ’ತಾಯ್ ಕೂತ್ತಾಲ್’. ವಯಸ್ಸಾದ ತಂದೆ-ತಾಯಿ, ಅಣ್ಣ-ಅಕ್ಕ, ದೊಡ್ಡಪ್ಪ-ಚಿಕ್ಕಪ್ಪ, ಅತ್ತೆ-ಮಾವ, ದೊಡ್ಡಮ್ಮ-ಚಿಕ್ಕಮ್ಮ ಇವುರುಗಳ ಆರೋಗ್ಯ ವೆಚ್ಚ ಭರಿಸಲಾಗದೆ ಅಥವಾ ಊಟ ಹಾಕಲಾಗದೆ, ಒಮ್ಮೆ ಕೊನೆಯದಾಗಿ ಹಬ್ಬದೂಟ ಹಾಕಿ ಕಾಣದ ಲೋಕಕ್ಕೆ ಕಳಿಸುವುದಾಗಿದೆ. ಇಂತಹ ಮರಣಾಚರಣೆ ಕೆಲವೊಮ್ಮೆ ಸಮ್ಮತಿಯಿಂದಲೂ ನಡೆಯುತ್ತದೆ. ಹೀಗಾಗಿ ಇದಕ್ಕೆ ’ದಯಾಮರಣ’ ಎಂಬ ಲೇಬಲ್ನ್ನು ಅಂಟಿಸಿದ್ದಾರೆ.
’ತಾಯ್ ಕೂತ್ತಾಲ್’ ಕಿವಿಗೆ ಬಿದ್ದಾಗಿನಿಂದ ಸಾಕಷ್ಟು ದಿನ ನಿದ್ದೆ ಬರದೇ ನರಳಿರುವೆ. ಇದನ್ನು ಗಲ್ಲು ಶಿಕ್ಷೆಗೆ ಹೋಲಿಸಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಗಲ್ಲು ಶಿಕ್ಷೆಯಲ್ಲಿ ಕುತ್ತಿಗೆಗೆ ಹಗ್ಗ ಬಿಗಿದು ಪ್ರಾಣ ತೆಗೆಯುವರು. ’ತಾಯ್ ಕುತ್ತಾಲ್’ನಲ್ಲಿ ಹರಳೆಣ್ಣೆ ಸ್ನಾನ ಮಾಡಿಸಿಯೇ ಪ್ರಾಣ ತೆಗೆಯುವರು. ವಯಸ್ಸಾದ ಹಿರಿಯರ ವೈದ್ಯಕೀಯ ವೆಚ್ಚ, ಆಹಾರದ ವೆಚ್ಚ ಭರಿಸಲಾಗದೆ, ಕುಟುಂಬ ವರ್ಗ ಚರ್ಚೆ ಮಾಡಿ ’ತಾಯ್ ಕೂತ್ತಾಲ್’ ವಿಧಿಸಲಾಗುತ್ತದೆ. ನ್ಯಾಯಾಲಯ ಸತ್ತಾಸತ್ಯತೆ ಪರಾಮರ್ಶಿಸಿ ಸಾಕ್ಷಿಗಳನ್ನು ನೋಡಿ ಗಲ್ಲುಶಿಕ್ಷೆ ವಿಧಿಸುತ್ತದೆ. ಇಲ್ಲಿ ಕೊನೆ ಆಸೆ ಕೇಳುವರು. ’ತಾಯ್ ಕೂತ್ತಾಲ್’ನಲ್ಲಿ ಅಂತಹದಕ್ಕೆ ಅವಕಾಶವೇ ಇರುವುದಿಲ್ಲ. ಯಾವುದೇ ಆಸೆಗಳಿದ್ದರೂ ಅದಕ್ಕೆ ಎಳ್ಳು ನೀರು ಬಿಡಲೇಬೇಕು. ಮಾಡಿಟ್ಟ ಭಕ್ಷ್ಯಗಳನ್ನು ಭಜಿಸಲೇಬೇಕು.
ಮಕ್ಕಳಿಲ್ಲದ ಹಿರಿಯರು, ಮಕ್ಕಳಿದ್ದೂ ಬಡವರಾಗೇ ಉಳಿದಿರುವ ಹಿರಿಯರ ಮನೆ ಮುಂದೆ ನೀರು ಕಾಯುತ್ತಿದೆ, ಹಬ್ಬದೂಟ ತಯಾರಾಗುತ್ತಿದೆ ಎಂದರೆ, ಅಲ್ಲಿನ ಹಿರಿಯ ’ತಾಯ್ ಕೂತ್ತಾಲ್’ಗೆ ಒಳಗಾಗುತ್ತಾನೆ ಎಂದೇ ಅರ್ಥ. ಹಗಲಿರುಳು ಕುಟುಂಬ ವರ್ಗಕ್ಕಾಗಿ ಜೀವ ಸವೆಸಿದ ಹಿರಿಯ ಜೀವ ಯಾವುದೇ ಅಪರಾಧ ಎಸಗದಿದ್ದರೂ, ಆಹಾರ, ಆರೋಗ್ಯ ಲಭಿಸದೇ ಜೀವ ಬಿಡಲೇಬೇಕು.
ಇಲ್ಲಿ ’ತಾಯ್ ಕೂತ್ತಾಲ್’ಗೆ ಗುರಿಪಡಿಸುವ ಕುಟುಂಬ ವರ್ಗದವರು ಕೊಲೆಗಡುಕರೋ, ಅಥವಾ ಆಹಾರ, ಆರೋಗ್ಯ ನೀಡದ ನಮ್ಮನ್ನಾಳುವವರು ಕೊಲೆಗಡುಕರೋ ಅರ್ಥವಾಗುತ್ತಿಲ್ಲ.
ಹಾಗೆಯೇ ಜಾರ್ಖಂಡ್ನಲ್ಲಿ, ಉತ್ತರಪ್ರದೇಶದಲ್ಲಿ, ಕರ್ನಾಟಕದಲ್ಲಿ ನಡೆದ ಹಸಿವಿನ ಸಾವು ಸರ್ಕಾರಿ ಪ್ರಾಯೋಜಿತ ಹತ್ಯೆ. ಬಡವರಿಗೆ ಸುಲಭಕ್ಕೆ ಎಟುಕದ ಕಾನೂನು ತಂದು, ಆಹಾರ ಧಾನ್ಯ ನೀಡದೆ ವಂಚಿಸಿದ್ದರಿಂದಲೇ ಇವರುಗಳು ಅಸುನೀಗಲು ಕಾರಣವಾಗಿದೆ. ಆಡಳಿತ ನಡೆಸುವವರು ಇಂತಹ ಸಾವನ್ನು ’ಕಾಯಿಲೆ’ ಎಂಬಂತೆ ಚಿತ್ರಿಸಿ ಹಣೆಪಟ್ಟಿ ಕಟ್ಟಿ ಕರೆಯಲಿ. ಆದರೆ, ಹಸಿವು ಒಬ್ಬ ಮನುಷ್ಯನನ್ನು ನೇರವಾಗಿ ಕೊಲ್ಲುವುದಿಲ್ಲ. ಬದಲಿಗೆ, ಹತ್ತು ಹಲವು ರೋಗರುಜಿನಗಳು ಮುತ್ತಿಕೊಂಡು ಬಲಿ ಪಡೆಯುತ್ತದೆ. ರಾಷ್ಟ್ರೀಯ ಆಹಾರಭದ್ರತೆ ಕಾಯ್ದೆಯಡಿ ಆಹಾರದಾನ್ಯ ನೀಡದೆ ಜನರನ್ನು ಹಸಿವಿನಿಂದ ಕೊಲ್ಲುವುದು ಎಷ್ಟರಮಟ್ಟಿಗೆ ಸರಿ? ಬಯೊಮೆಟ್ರಿಕ್ ಗುರುತಿಗಾಗಿ ಆಹಾರದ ಹಕ್ಕನ್ನೇ ಕಸಿಯುವುದು ಸೂಕ್ತವಲ್ಲ. ಇಷ್ಟಕ್ಕೂ ಆಧಾರ್ನಿಂದ ಖಾಸಗಿ ಹಕ್ಕಿಗೆ ಧಕ್ಕೆ ಬರುತ್ತದೆ ಎಂಬ ದಾವೆ ನ್ಯಾಯಾಲಯದಲ್ಲಿ ಇದ್ದಾಗಲೂ ಹೇರಿದ್ದು ಸೂಕ್ತವಲ್ಲ.
ಪಾಪದ ಜನ ಪಡಿತರ ಪಡೆಯಲು ಪಡಬಾರದ ಪಾಡು ಪಡಬೇಕಿದೆ. ಒಬ್ಬರ ಬಯೋಮೆಟ್ರಿಕ್ಗಾಗಿ ಮನೆ ಮಂದಿಯೆಲ್ಲರೂ ಉಪವಾಸ ಬೀಳಬೇಕಿದೆ. ಬಯೋಮೆಟ್ರಿಕ್ ವಿವರಗಳನ್ನು ದಾಖಲಿಸುವಾಗ ತಪ್ಪಾಗಬಾರದು. ಬೆರಳಚ್ಚುಗಾರನು ಉದಾಸೀನದಿಂದ ಒಂದಕ್ಷರ ತಪ್ಪಾದರೂ ಸರಿಪಡಿಸಲು ತಿಂಗಳುಗಟ್ಟಲೆ ಕಾಲಾವಕಾಶ ಬೇಕು.
ಹೀಗಿರುವಾಗ ಅದೆಷ್ಟು ಜನರ ಹೆಸರು ತಪ್ಪಾಗಿವೆಯೋ ಗೊತ್ತಿಲ್ಲ. ವ್ಯಕ್ತಿಯ ಬೆರಳ ಗುರುತು ಸರಿಹೋಗಬೇಕು. ಇಲ್ಲದಿದ್ದಲ್ಲಿ ಪಡಿತರ ವಿತರಿಸುವುದಿಲ್ಲ. ಉದಾಹರಣೆಗೆ ’ಜಾರ್ಖಂಡ್ನ ೮೯ ವರ್ಷದ ಮಹಿಳೆಯ ವಿವರಗಳು ಮತ್ತೊಬ್ಬರ ವಿವರಗಳೊಂದಿಗೆ ತಾಳೆ ಆಗಿವೆ. ಇದರಿಂದ ಈಕೆಗೆ ಪಡಿತರ ನಿಲ್ಲಿಸಲಾಗಿದೆ. ಸಾಲದ್ದಕ್ಕೆ ವೃದ್ದಾಪ್ಯ ವೇತನವನ್ನು ನಿಲ್ಲಿಸಲಾಗಿದೆ. ಹೀಗಾಗಿ ಆಕೆ ಹಸಿವಿನಿಂದ ಪ್ರಾಣ ಬಿಟ್ಟಿದ್ದಾಳೆ.
ಕೇಂದ್ರ ಸರ್ಕಾರದ ಅಧಿಕೃತ ಆರ್ಥಿಕ ಸಮೀಕ್ಷೆ ೨೦೧೬-೧೭ ರ ಭಾಗ ೧ ರಂತೆ ಪಡಿತರ ಹಂಚಿಕೆಯಲ್ಲಿ ಶೇಕಡ ೪೦ ರಷ್ಟು ತಪ್ಪಾಗಿದೆ. ಶೇಕಡ ೩೪ ರಷ್ಟು ಸೋರಿಕೆಯಾಗುತ್ತಿದೆ. ಅಂದರೆ, ಆಹಾರ ಧಾನ್ಯದ ಹಂಚಿಕೆಯನ್ನು ಕೂಡ ಇನ್ನೂ ಸಮರ್ಪಕವಾಗಿ ಮಾಡಲು ಸಾಧ್ಯವಾಗಿಲ್ಲ. ಇದು ತೂಕದ ಮೋಸ ಆಗಿರಬಹುದು. ಆಹಾರ ಸಾಗಿಸುವಾಗ ಕಳ್ಳತನ ಆಗಿರಬಹುದು. ಆದರೂ ನಾವು ಮುಂದುವರೆದಿದ್ದೇವೆ. ಗಡಿದೇಶಗಳ ಮೇಲೆ ಯುದ್ಧಕ್ಕೆ ನಿಂತಿದ್ದೇವೆ. ಯಾವುದೇ ಅಭಿವೃದ್ಧಿಶೀಲ ರಾಷ್ಟ್ರಕ್ಕಿಂತ ಕಡಿಮೆಯಿಲ್ಲ ಎಂದು ಬೀಗುತ್ತಿದ್ದೇವೆ. ಬಲಾಢ್ಯ ಮಿಲಿಟರಿ ಮತ್ತು ರಕ್ಷಣಾ ಶಕ್ತಿಯಾಗಿದ್ದೇವೆಂದು ಎದೆ ಸೆಟೆಸಿ ಸಾರುತ್ತಿದ್ದೇವೆ. ಆದರೆ, ಮಾನವ ಅಭಿವೃದ್ಧಿ ಸೂಚ್ಯಾಂಕ ಕುಸಿಯುತ್ತಿದೆ.
೨೦೧೭ ರ ಅಕ್ಟೋಬರ್ನಲ್ಲಿ ಗ್ಲೋಬಲ್ ಹ್ಯೂಮೆನ್ ಇಂಡೆಕ್ಸ್ (ಜಿಹೆಚ್ಐ) ಇಂಟರ್ನ್ಯಾಷನಲ್ ಫುಡ್ ಪಾಲಿಸಿ ರೀಸರ್ಚ್ ಇನ್ಸ್ಟಿಟ್ಯೂಟ್ (ಐಎಫ್ಡಿಆರ್ಐ) ಬಿಡುಗಡೆಗೊಳಿಸಿದ ಅಂಕಿಅಂಶದ ಪ್ರಕಾರ ೧೧೯ ಅಭಿವೃದ್ಧಿ ದೇಶಗಳ ಪಟ್ಟಿಯಲ್ಲಿ ಭಾರತ ೧೦೦ನೇ ಸ್ಥಾನ ಹೊಂದಿದೆ. ಗ್ಲೋಬಲ್ ಹ್ಯೂಮನ್ ಇಂಡೆಕ್ಸ್ ೩೧.೪ ಅಂಕಗಳನ್ನು ಗಳಿಸಿ ’ಗಂಭೀರ ವರ್ಗ’ ಎಂಬ ಬಿರುದಿಗೆ ಭಾಜನವಾಗಿದೆ. ಸರ್ವಾಧಿಕಾರಿ ಆಡಳಿತದಲ್ಲಿರುವ ಉತ್ತರ ಕೋರಿಯಾಗಿಂತ ನಮ್ಮ ದೇಶದ ಸೂಚ್ಯಾಂಕದ ಸ್ಥಿತಿ ಕೆಳಗಿದೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡತನ ನಿರ್ಮೂಲನೆಗಾಗಿ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಆದರೂ ಆಶಾದಾಯಕ ಪ್ರಗತಿ ಕಂಡಿಲ್ಲ. ನಮ್ಮ ದೇಶ ಬಡತನ ನಿರ್ಮೂಲನೆಯಲ್ಲಿ ಮಾತ್ರವಲ್ಲದೆ ಮಾನವನ ಅಭ್ಯುದಯಕ್ಕೆ ಬೇಕಾದ ಶಿಕ್ಷಣ, ಮಹಿಳಾ ಸಬಲೀಕರಣ, ಸಂಪತ್ತಿನ ಅಸಮಾಧಾನ ಹಂಚಿಕೆ ಸೇರಿದಂತೆ ಹಲವು ವಿಚಾರಗಳಲ್ಲಿ ಹಿಂದೆ ಬಿದ್ದಿದೆ. ೫ ವರ್ಷದ ಒಳಗಿನ ಹಸುಗೂಸು ರಸ್ತೆಬದಿಯಲ್ಲಿ ನಿಂತು ಭಿಕ್ಷಾಟನೆಯಲ್ಲಿ ತೊಡಗಿದೆ. ನಾವಿಂದಿಗೂ ಎಲ್ಲವನ್ನೂ ಮಿಲಿಟರಿ ಮಾದರಿಯಲ್ಲೇ ಕಾಣುತ್ತಿದ್ದೇವೆ. ರಾಷ್ಟ್ರೀಯ ಭದ್ರತೆ ಎಂದರೆ ಗಡಿ ಕಾಯುವುದು, ಕರಾವಳಿ ತೀರ ಕಾಯುವುದು, ಆಗಸದ ಮೇಲೆ ಕಣ್ಣಿಟ್ಟು ಶತ್ರು ನುಸುಳದಂತೆ ಕಾಯುವುದು ಎಂಬುದೇನೋ ಸರಿಯಾಗಿದೆ. ಆದರೆ ಆಂತರಿಕ ಭದ್ರತೆಯೆಂದರೆ ದೇಶದೊಳಗೆ ಕಾನೂನು ಸುವ್ಯವಸ್ಥೆ ಕಾಪಾಡುವುದಷ್ಟೇ ಎಂದು ನಮ್ಮವರು ಭಾವಿಸಿದ್ದಾರೆ. ಕಾನೂನು ಸುವ್ಯವಸ್ಥೆಯೊಂದಿಗೆ ಸುಸ್ಥಿರ ಅಭಿವೃದ್ಧಿಯನ್ನು ಕಾಪಾಡುವುದು ಕೂಡ ಆಂತರಿಕ ಭದ್ರತೆಯ ಪ್ರಮುಖ ಕರ್ತವ್ಯ.
ನಮ್ಮ ದೇಶಕ್ಕೆ ಅಭಿವೃದ್ಧಿ ತಂತ್ರಗಾರಿಕೆ ಬೇಕಿದೆ. ನರೇಗಾದಂತಹ ಯೋಜನೆಗಳನ್ನು ಬಳಸಿಕೊಳ್ಳಬೇಕು. ಇದರಿಂದ ಜನ ಉದ್ಯೋಗ ಅರಸಿ ಗುಳೆ ಹೋಗುವುದನ್ನು ತಪ್ಪಿಸಬಹುದು. ಬಡತನ ನಿರ್ಮೂಲನೆ ಮತ್ತು ಆರ್ಥಿಕ ಅಭಾವ ನೀಗಿಸಲು ನರೇಗಾದಂತಹ ಯೋಜನೆ ತಾತ್ಕಾಲಿಕವಾಗಿ ನೆರವಿಗೆ ಬರಲಿದೆ. ದೀರ್ಘಕಾಲೀನ ಅಭಿವೃದ್ಧಿಗೆ ಶಿಕ್ಷಣ, ಆರೋಗ್ಯ, ಕೌಶಲ್ಯ, ಅಭಿವೃದ್ಧಿ ಕ್ಷೇತ್ರದ ಮೇಲೆ ಹಣ ಹೂಡಬೇಕು. ಇದಕ್ಕಾಗಿ ರಕ್ಷಣೆ ಮತ್ತು ನಾಗರೀಕ ಸೇವಾ ವಲಯದಲ್ಲಿ ಮಾನವ ಶಕ್ತಿ ಕಡಿತಗೊಳಿಸಬೇಕು. ಆಂತರಿಕ ಲೆಕ್ಕಪರಿಶೋಧನೆಯನ್ನು ಬಲಪಡಿಸಬೇಕು. ಇದೆಲ್ಲಕ್ಕಿಂತಲೂ ಮುಖ್ಯವಾಗಿ ಕೇರಳ ಮಾದರಿಯ ಅಭಿವೃದ್ಧಿಯನ್ನು ಅನುಸರಿಸಬೇಕು. ನಮ್ಮ ಮೇಲೆ ಗುಜರಾತ್ ಮಾದರಿ ಹೇರಲಾಗುತ್ತಿದೆಯೇ ವಿನಃ ಕೇರಳ ಮಾದರಿ ಅಭಿವೃದ್ಧಿಯನ್ನು ಹೇರುತ್ತಿಲ್ಲ. ಕೇರಳದ ಯಾವುದೇ ಮೂಲೆಯಲ್ಲಿ ನೋಡಿದರೂ ಶಾಲೆಗಳಿವೆ. ಆಸ್ಪತ್ರೆಗಳಿವೆ. ಕೌಶಲ್ಯದ ಅಭಿವೃದ್ಧಿಗೆ ಒತ್ತುನೀಡಿ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ ಬದುಕುವುದನ್ನು ಕಲಿಸಲಾಗುತ್ತಿದೆ.
ಹಸಿವು ನಮ್ಮ ದೇಶವನ್ನು ಮಾತ್ರ ಕಾಡುತ್ತಿರುವ ಪಿಡುಗೇ? ಎಂಬ ಪ್ರಶ್ನೆಯೂ ನಿಮ್ಮಲ್ಲಿ ಮೂಡಿರಬೇಕು. ಹೌದು, ’ಹಸಿವು’ ಜಗತ್ತಿನ ಹಲವು ಭಾಗಗಳಲ್ಲಿ ಕುಣಿದಾಡುತ್ತಿದೆ. ಇದಕ್ಕೆ ಗಡಿಯ ಮಿತಿಯಿಲ್ಲ. ಆಹಾರವನ್ನೇ ಕಾಣದವರು ಅಪೌಷ್ಟಿಕತೆಯಿಂದ ನರಳುತ್ತಿರುವವರು ಹಲವು ದೇಶಗಳಲ್ಲಿದ್ದಾರೆ. ಯಾವುದನ್ನೂ ನಾವು ಅಭಿವೃದ್ಧಿ ದೇಶ ಎಂದು ಭಾವಿಸಿದ್ದೇವೆಯೋ ಅಲ್ಲಿಯೂ ಹಸಿವು ನೆಲೆಸಿದೆ.
ವಿಶ್ವಸಂಸ್ಥೆಯ ಖಿhe Sಣಚಿಣes oಜಿ ಜಿooಜ Seಛಿuಡಿiಣies & ಓuಣಡಿiಣioಟಿ iಟಿ ಣhe Woಡಿಟಜ ೨೦೧೮ರ ವರದಿ ಪ್ರಕಾರ ಕಳೆದ ಮೂರು ವರ್ಷಗಳಿಂದ ಹಸಿವಿನ ಹಾಹಾಕಾರ ಹೆಚ್ಚಾಗಿದೆ. ಪ್ರತಿ ಒಂಬತ್ತು ಜನರಲ್ಲಿ ಒಬ್ಬ ಹಸಿವಿನಿಂದ ನರಳುತ್ತಿದ್ದಾನೆ. ದಕ್ಷಿಣಾ ಅಮೆರಿಕಾ ಮತ್ತು ಆಫ್ರಿಕಾ ಪ್ರದೇಶಗಳಲ್ಲಿ ’ಹಸಿವು’ ಕಾಡುತ್ತಿದೆ. ಜಗತ್ತಿನಲ್ಲಿ ಅಪೌಷ್ಠಿಕತೆಯಿಂದ ನರಳುತ್ತಿರುವ ಪ್ರತಿ ೫ ಜನರಲ್ಲಿ ಒಬ್ಬ ಭಾರತೀಯನಾಗಿರುತ್ತಾನೆ.
೧೭೯೮ರಲ್ಲಿ ಥಾಮಸ್ ರಾಬರ್ಟ್ ಮಲ್ತಾಸ್ ೧೮ನೇ ಶತಮಾನ ಎದುರಿಸುವ ಜನಸಂಖ್ಯೆಯ ಬಗ್ಗೆ ಪ್ರಬಂಧ ಮಂಡಿಸಿದ್ದನು. ಅದರಲ್ಲಿ ಅಂದಿನ ಜನಸಂಖ್ಯೆ ೯೦೦ ಮಿಲಿಯನ್ ಇತ್ತು. ಅದೀಗ ೮ರಂತೆ ವೃದ್ಧಿಯಾಗಿದೆ. ಅಂದರೆ ಪ್ರತಿವರ್ಷ ೮೩ ಮಿಲಿಯನ್ನಂತೆ ವೃದ್ಧಿಯಾಗಿದೆ. ಇದು ಕೂಡ ಒಂದು ಕಾರಣವಾಗಿದೆ. ಜಗತ್ತಿನಾದ್ಯಂತ ಜನ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಜನಸಂಖ್ಯೆ ಏರುತ್ತಲೇ ಇದೆ. ಹವಾಮಾನ ಮತ್ತು ಪರಿಸರ ಬದಲಾವಣೆಯಿಂದ ಆಹಾರದ ಸಮಸ್ಯೆ ಕಾಡುತ್ತಿದೆ. ಜೊತೆಗೆ ನಮ್ಮ ಆಹಾರ ಪದ್ಧತಿ ಕೂಡ ಹವಾಮಾನ ಪರಿಸರ ಸಮಸ್ಯೆ ಉಲ್ಬಣವಾಗಲು ಕಾರಣವಾಗಿದೆ.
ನಮ್ಮಲ್ಲಿ ಅಡಗಿರುವ ಹಸಿವು ಸದ್ದಿಲ್ಲದೇ ಸಾಂಕ್ರಾಮಿಕ ರೋಗಗಳನ್ನು ಆಹ್ವಾನಿಸುತ್ತಿದೆ. ಅಪೌಷ್ಠಿಕತೆ ಮನುಷ್ಯನ ಫಲವತ್ತತೆಯನ್ನು ಕಸಿಯುತ್ತದೆ. ಅಪೌಷ್ಠಿಕತೆಗೆ ಇನ್ನೊಂದು ಕಾರಣವೂ ಇದೆ. ಅದು ಅಗತ್ಯಕ್ಕಿಂತ ಹೆಚ್ಚಾಗಿ ವಿಟಮಿನ್ ಮತ್ತು ಕ್ಯಾಲೋರಿಗಳನ್ನು ತೆಗೆದುಕೊಳ್ಳುವುದು. ಇದರಿಂದ ಸ್ಥೂಲಕಾಯರಾಗುತ್ತೇವೆ. ಅಂದರೆ ಎತ್ತರಕ್ಕಿಂತ ತೂಕ ಹೆಚ್ಚಾಗಿರುತ್ತದೆ. ಒಂದು ಅಂದಾಜಿನಂತೆ ಜಗತ್ತಿನ ೩/೧ ಭಾಗದಷ್ಟು ಯುವಕರು ತೂಕದಲ್ಲಿ ಹೆಚ್ಚಿದಾರೆ. ಹಾಗೆಯೇ ಶೇಕಡ ೧೦ ರಿಂದ ೧೫ರಷ್ಟು ಜನ ಸ್ಥೂಲಕಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಸಿವು ಮಾತ್ರವಲ್ಲದೇ ಅಪೌಷ್ಠಿಕತೆ ಹೊಂದಿರುವವರು ಕೂಡ ತನಗೆ ಅಗತ್ಯ ಇರುವಷ್ಟು ಪೌಷ್ಠಿಕಾಂಶ ಪಡೆದುಕೊಳ್ಳುತ್ತಿಲ್ಲ. ಸುಮಾರು ೮೨೧ ಮಿಲಿಯನ್ ಜನ ತೀವ್ರವಾದ ಹಸಿವಿನಿಂದ ಬಳಲುತ್ತಿದ್ದಾರೆ. ೧ ಬಿಲಿಯನ್ ಜನ ಕ್ಯಾಲೋರಿ ಮತ್ತು ಪ್ರೋಟಿನ್ ಕೊರತೆಯಿಂದ ನರಳುತ್ತಿದ್ದಾರೆ. ಇನ್ನೂ ೧ ಬಿಲಿಯನ್ ಜನ ಬೊಜ್ಜಿನ ಸಮಸ್ಯೆ ಪೀಡಿತರಾಗಿದ್ದಾರೆ. ಜಗತ್ತಿನ ಜನಸಂಖ್ಯೆಯ ೭.೮ ಬಿಲಿಯನ್ನಲ್ಲಿ ೩ ಬಿಲಿಯನ್ ಜನ ಅಪೌಷ್ಠಿಕತೆಯಿಂದ ನರಳುತ್ತಿದ್ದಾರೆ.
ಜಗತ್ತಿನಲ್ಲಿ ಬೇಡವಾದ ಶೇಕಡಾ ೫೦ರಷ್ಟು ಮಕ್ಕಳು ನಮ್ಮ ದೇಶದಲ್ಲಿದ್ದಾರೆ. ಇವರಲ್ಲಿ ಶೇಕಡ ೩೦ರಷ್ಟು ಮಕ್ಕಳು ಕುಂಠಿತಗೊಂಡವುಗಳು. ಪ್ರತಿ ದಿನ ೩ ಸಾವಿರ ಮಕ್ಕಳು ’ಅಪೌಷ್ಠಿಕತೆ’ ಎಂಬ ಹಣೆಪಟ್ಟಿ ಹೊತ್ತು ಅಸುನೀಗುತ್ತಿವೆ. ಇದು ಸದ್ದಿಲ್ಲದೇ ತೆರೆಗೆ ಸರಿದು ಹೋಗುತ್ತಿದೆ. ಇವರು ಹಸಿವಿನಿಂದ ಸತ್ತರೆಂದು ಜಗತ್ತಿನ ಮುಂದೆ ಹೇಳಲು ನಮ್ಮವರಿಗೆ ಹೇಳಲು ಧೈರ್ಯವಿಲ್ಲ. ಆದರೂ, ಬೇಟಿ ಪಢಾವೋ ಬೇಟಿ ಬಚಾವೋ ಎಂದು ಕೂಗುತ್ತಾರೆ. ’ಹಸಿವು’ ದಿನವೂ ಹತ್ಯೆಗೈಯುತ್ತಿದ್ದರೆ ಅದಕ್ಕೆ ’ಅಪೌಷ್ಠಿಕತೆ’ ಎಂಬ ಮೆಡಿಕಲ್ ಲೇಬಲ್ ಹಾಕಿ ಅಂಟಿಸಲಾಗುತ್ತಿದೆ. ಹೀಗಾಗಿಯೇ ಹಸಿವಿನಿಂದ ಸತ್ತವರ ದೇಹ ಪೋಸ್ಟ್ಮಾರ್ಟಂ ಮಾಡಿದಾಗ ಅಪೌಷ್ಠಿಕತೆ ಎಂಬ ವರದಿ ಹೊರ ಬೀಳುತ್ತಿದೆ. ಪ್ರತಿದಿನ ಹುಟ್ಟುವ ಒಂದು ಸಾವಿರ ಮಕ್ಕಳಲ್ಲಿ ೩೪ ಮಕ್ಕಳು ತಾಯಿಯ ಹೊಟ್ಟೆಯಲ್ಲಿಯೇ ಅಸುನೀಗುತ್ತವೆ. ಇನ್ನು ೫ ವರ್ಷದೊಳಗಿನ ೯ ಲಕ್ಷ ಮಕ್ಕಳು ಸ್ವತಂತ್ರ ಭಾರತ ಎಂದರೇನೆಂಬುದನ್ನೇ ಅರಿಯದೇ ಪ್ರಾಣ ಬಿಡುತ್ತಿವೆ. ಸುಮಾರು ೧೯ ಕೋಟಿ ಜನ ರಾತ್ರಿ ಊಟ ಇಲ್ಲದೇ ನರಳುತ್ತಾ ನಿದ್ದೆಗೆ ಜಾರುತ್ತಿದ್ದಾರೆ.
’ಹಸಿವಿನ ಸಾವು’ ದೇಶದ ನೈತಿಕತೆಗೊಂದು ಕಪ್ಪುಚುಕ್ಕೆ. ಅದೊಂದು ದುರಂತದ ಸಂಗತಿ. ಯುದ್ಧ ಬಯಸುವ ಮನಸ್ಸುಗಳೇ, ನಮ್ಮಲ್ಲಿಯೇ ಹಸಿವಿನಿಂದ ಅಸುನೀಗುತ್ತಿರುವವರನ್ನು ಮೊದಲು ರಕ್ಷಿಸಿ.










