“ಭಾಗಮನೆ ಕಪ್ 2019” ರಾಜ್ಯ ಮಟ್ಟದ ಗಾಲ್ಫ್ ಪಂದ್ಯಾವಳಿಯಲ್ಲಿ ಚಿಕ್ಕಮಗಳೂರಿನ ಕೆ.ಎನ್.ಪ್ರಣವ್ ಗೆ ಪ್ರಥಮ ಸ್ಥಾನ…

216
firstsuddi

ಚಿಕ್ಕಮಗಳೂರು: ಭಾಗಮನೆ ಗ್ರೂಪ್ಸ್ ನಗರ ಹೊರವಲಯದ ಗಾಲ್ಫ್ ಕ್ಲಬ್‍ನಲ್ಲಿ ಆಯೋಜಿಸಿದ್ದ ಮೂರು ದಿನಗಳ ಕಾಲದ “ಭಾಗಮನೆ ಕಪ್ 2019” ರಾಜ್ಯ ಮಟ್ಟದ ಗಾಲ್ಫ್ ಪಂದ್ಯಾವಳಿಯಲ್ಲಿ ಚಿಕ್ಕಮಗಳೂರಿನ ಕೆ.ಎನ್.ಪ್ರಣವ್ ಪ್ರಥಮ ಸ್ಥಾನ ಗಳಿಸಿದರು.
ಬೆಂಗಳೂರಿನ ನಿಶಾಂತ್ ಕುಲಕರ್ಣಿ ದ್ವಿತೀಯ ಸ್ಥಾನ ಪಡೆದುಕೊಂಡರು, ಪಂದ್ಯಾವಳಿಯ ನಂತರ ಭಾನುವಾರ ನಡೆದ ವರ್ಣ ರಂಜಿತ ಸಮಾರಂಭದಲ್ಲಿ ಭಾಗಮನೆ ಗ್ರೂಪ್ಸ್‍ನ ಹಣಕಾಸು ವಿಭಾಗದ ವ್ಯವಸ್ಥಾಪಕ ಶ್ರವಣ್ ಮಹಿಪಾಲ್ ವಿಜೇತರಿಗೆ ಬಹುಮಾನ ವಿತರಿಸಿದರು.
ಸಮಗ್ರ ಪ್ರಶಸ್ತಿಗೆ ಪಾತ್ರರಾದ ಕೆ.ಎನ್.ಪ್ರಣವ್ ಅವರಿಗೆ ಭಾಗಮನೆ ಕಪ್ ಟ್ರೋಫಿಯನ್ನು ನೀಡಿ ಪುರಸ್ಕರಿಸಲಾಯಿತು, ಮೂರು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಬೆಂಗಳೂರು, ಮೈಸೂರು, ಶಿವಮೊಗ್ಗ, ಹಾಸನ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ 190 ಕ್ರೀಡಾಪಟುಗಳು ಪಾಲ್ಗೊಂಡಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಭಾಗಮನೆ ಗ್ರೂಪ್ಸ್‍ನ ಹಣಕಾಸು ವಿಭಾಗದ ವ್ಯವಸ್ಥಾಪಕ ಶ್ರವಣ್ ಮಹಿಪಾಲ್ ಸಾರ್ವಜನಿಕರಲ್ಲಿ ಗಾಲ್ಫ್ ಕ್ರೀಡೆಯ ಬಗ್ಗೆ ಆಸಕ್ತಿ ಬೆಳೆಸುವ ಉದ್ದೇಶದಿಂದ ಕಳೆದ ನಾಲ್ಕು ವರ್ಷಗಳಿಂದ ಪಂದ್ಯಾವಳಿಯನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು, ಪಂದ್ಯಾವಳಿಯ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಗಾಲ್ಫ್ ಕ್ಲಬ್‍ನ ಅಧ್ಯಕ್ಷ ಎ.ಬಿ.ಸುದರ್ಶನ್, ಕ್ಯಾಪ್ಟನ್ ರವಿಶಂಕರ್, ಖಜಾಂಚಿ ಎಸ್.ಆರ್.ಸತ್ಯನಾರಾಯಣ, ಕಾರ್ಯದರ್ಶಿ ಎ.ಎಸ್.ಶಂಕರೇಗೌಡ, ಗೋಪಾಲಕೃಷ್ಣ, ಉಪಸ್ಥಿತರಿದ್ದರು.