ಚಿಕ್ಕಮಗಳೂರು : ದೈಹಿಕ ಶಿಕ್ಷಕರು ಶಾಲೆಗಳಿಗೆ ಆಧಾರ ಸ್ತಂಭಗಳಿದ್ದಂತೆ-ಎಸ್.ಈ.ಲೋಕೇಶ್ವರಾಚಾರ್.

190

ಚಿಕ್ಕಮಗಳೂರು : ದೈಹಿಕ ಶಿಕ್ಷಕರು ಶಾಲೆಗಳಿಗೆ ಆಧಾರ ಸ್ತಂಭಗಳಿದ್ದಂತೆ ಎಂದು ಪ್ರಾಥಮಿಕ ಶಾಲಾ ಗ್ರೇಡ್-2 ದೈಹಿಕ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಎಸ್.ಈ.ಲೋಕೇಶ್ವರಾಚಾರ್ ಹೇಳಿದರು.
ಪ್ರಾಥಮಿಕ ಶಾಲಾ ಗ್ರೇಡ್-2 ದೈಹಿಕ ಶಿಕ್ಷಕರ ಜಿಲ್ಲಾ ಸಂಘ ನಗರದ ಆಜಾದ್ ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ನಿವೃತ್ತ ಶಿಕ್ಷಕರಿಗೆ ಮತ್ತು ಪ್ರಸಕ್ತ ಸಾಲಿನ ಪ್ರಶಸ್ತಿ ಪುರಸ್ಕøತ ಶಿಕ್ಷಕರಿಗೆ ಶನಿವಾರ ಏರ್ಪಡಿಸಿದ್ದ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೈಹಿಕ ಶಿಕ್ಷಕರಿಂದ ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡುತ್ತದೆ ಉಳಿದ ವಿಷಯಗಳ ಶಿಕ್ಷಕರಿಂದ ಜ್ಞಾನ ಬೆಳೆಯುತ್ತದೆ, ದೈಹಿಕ ಶಿಕ್ಷಕ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದಲ್ಲಿ ಮಕ್ಕಳ ಬದುಕು ಹಸನಾಗುತ್ತದೆ ಎಂದರು.
ಪ್ರಶಸ್ತಿ ಮತ್ತು ಸನ್ಮಾನಗಳು ನಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುತ್ತವೆ, ವಿದ್ಯಾರ್ಥಿಗಳ ಏಳಿಗೆಗಾಗಿ ಪ್ರಾಮಾಣಿಕವಾಗಿ ದುಡಿದ ಶಿಕ್ಷಕರು ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುತ್ತಾರೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಮಹೇಶಪ್ಪ ದೈಹಿಕ ಶಿಕ್ಷಕರಲ್ಲಿ ವೃತ್ತಿಯ ಬಗ್ಗೆ ಹೆಚ್ಚಿನ ಒಲವನ್ನು ಬೆಳೆಸುವ ನಿಟ್ಟಿನಲ್ಲಿ ಈ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಪ್ರಸಕ್ತ ಸಾಲಿನ ಪ್ರಶಸ್ತಿಗಳಿಗೆ ಪಾತ್ರರಾಗಿರುವ ದೈಹಿಕ ಶಿಕ್ಷಕರಾದ ಫೈರೋಜ್ ಅಹಮದ್, ಕೆ.ಹೆಚ್.ಜಗದೀಶ್, ಕುಂಬುಗತ್ತಿ ಪ್ರಕಾಶ್, ಮಮತ ಹಾಗೂ ಸೇವೆಯಿಂದ ನಿವೃತ್ತರಾದ ಸೇವಾದಳದ ಶಿಕ್ಷಕರಾದ ಪುಂಡರೀಕ, ವಾಸುದೇವರಾಜ ಅರಸ್, ಮೊಗಣ್ಣಗೌಡ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಸಂಘದ ತಾಲ್ಲೂಕು ಅಧ್ಯಕ್ಷ ಕಾಳಯ್ಯ, ಕಾರ್ಯದರ್ಶಿ ಶಿವಪ್ಪ, ಖಜಾಂಚಿ ಕುಮಾರಸ್ವಾಮಿ ಉಪಸ್ಥಿತರಿದ್ದರು.