ಚಿಕ್ಕಮಗಳೂರು : ಜಿಲ್ಲಾದ್ಯಂತ ನಾಳೆಯಿಂದ ಮೇ 17ರವರೆಗೆ 144 ಸೆಕ್ಷನ್ ಜಾರಿ.

730

ಚಿಕ್ಕಮಗಳೂರು :ಕೆಲವೊಂದು ನಿಯಮಗಳನ್ನ ಹೊರತುಪಡಿಸಿ ಗ್ರೀನ್ ಜೋನ್‍ನಲ್ಲಿರೋ ಜಿಲ್ಲೆಗೆ ಮೂರನೇ ಹಂತದ ಲಾಕ್‍ಡೌನ್ ಅನ್ವಯವಾಗದ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲಾದ್ಯಂತ ಮೇ 4ನೇ ತಾರೀಖಿನಿಂದ ಮೇ 17ನೇ ತಾರೀಖಿನವರೆಗೆ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಸಂಜೆ ಏಳರಿಂದ ಬೆಳಗ್ಗೆ ಏಳರವರೆಗೆ ಐದು ಜನ ಗುಂಪಾಗಿ ಸೇರದಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಕೊರೋನ ಆರಂಭವಾದಾಗಿನಿಂದ ಕಾಫಿನಾಡಲ್ಲಿ ಒಂದೇ ಒಂದು ಕೊರೋನ ಪಾಸಿಟಿವ್ ಕೇಸಿಲ್ಲ. ಹಾಗಾಗಿ, ಚಿಕ್ಕಮಗಳೂರು ಗ್ರೀನ್ ಜೋನ್‍ನಲ್ಲಿದೆ. ಈಗ ಸರ್ಕಾರ ಗ್ರೀನ್ ಜೋನ್ ಜಿಲ್ಲೆಗಳಿಗೆ ಕೆಲವೊಂದು ಷರತ್ತುಗಳನ್ನ ನೀಡಿ ಲಾಕ್‍ಡೌನ್ ಸಂಪೂರ್ಣ ಸಡಿಲಿಕೆ ಮಾಡಿದೆ. ಕೇಂದ್ರ ಸರ್ಕಾರ ಕೊರೋನ ಆತಂಕದಿಂದ ದೇಶದಲ್ಲಿ ಇನ್ನೆರಡು ವಾರಗಳ ಕಾಲ ಲಾಕ್‍ಡೌನ್ ವಿಸ್ತಿರಿಸೋದ್ರಿಂದ ಗ್ರೀನ್ ಜೋನ್‍ನಲ್ಲಿರೋ ಚಿಕ್ಕಮಗಳೂರಲ್ಲಿ ಎರಡು ವಾರಗಳ ಕಾಲವೂ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಮದುವೆ ಹಾಗೂ ಅಂತ್ಯಸಂಸ್ಕಾರದಂತಹಾ ಕಾರ್ಯಕ್ರಮಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ. ಉಳಿದಂತೆ ಜನ ಗುಂಪಾಗಿ ಸೇರುವಂತಿಲ್ಲ ಎಂದು ಆದೇಶಿಸಿದ್ದಾರೆ. ನಾಳೆಯಿಂದ ಜಿಲ್ಲಾದ್ಯಂತ ಸರ್ಕಾರಿ ಬಸ್‍ಗಳೂ ಓಡಾಡಲಿದ್ದು, ಜಿಲ್ಲಾದ್ಯಂತ 100-120 ಬಸ್‍ಗಳು ತಾಲೂಕು ಕೇಂದ್ರಗಳಿಗೆ ಸಂಚರಿಸಲಿವೆ.