ಚಿಕ್ಕಮಗಳೂರು : ಜಿಮ್‍ನಲ್ಲೇ ನೇಣು ಬಿಗಿದುಕೊಂಡು ಜಿಮ್ ಟ್ರೈನರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕೊಪ್ಪ ತಾಲ್ಲೂಕಿನ ಜಯಪುರದಲ್ಲಿ ನಡೆದಿದೆ. ಜಯಪುರ ಸಮೀಪದ ದೂಬ್ಳ ಗ್ರಾಮದ ನಿವಾಸಿ ಸುನೀಲ್(26) ಆತ್ಮಹತ್ಯೆ ಮಾಡಿಕೊಂಡ ಜಿಮ್ ಟ್ರೈನರ್ ಎಂದು ಗುರುತಿಸಲಾಗಿದೆ. ಮೃತ ಸುನೀಲ್ ಜಯಪುರದಲ್ಲಿ ಜಿಮ್ ಇಟ್ಟುಕೊಂಡು ಯುವಕರಿಗೆ ಜಿಮ್ ಟ್ರೈನಿಂಗ್ ನೀಡುತ್ತಿದ್ದರು. ಆದರೆ ಮಹಾಮಾರಿ ಕೊರೊನಾ ವೈರಸ್ ಸೋಂಕಿನಿಂದ ಕಳೆದ 5 ತಿಂಗಳಿನಿಂದ ಲಾಕ್‍ಡೌನ್ ಆಗಿರುವ ಹಿನ್ನೆಲೆ ಜಿಮ್ ಕ್ಲೋಸ್ ಮಾಡಲಾಗಿತ್ತು. ಇದರಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಸುನೀಲ್ ಅವರು ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು 3 ತಿಂಗಳಿನಿಂದ ಆಟೋ ಚಲಾಯಿಸುತ್ತಿದ್ದರು. ಸುನೀಲ್ ಅವರು ಕಳೆದ ವರ್ಷ ಮಿಸ್ಟರ್ ಕೊಪ್ಪ ದೇಹದಾಢ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಮಿಸ್ಟರ್ ಕೊಪ್ಪ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ ಆರ್ಥಿಕ ನಷ್ಟ ಹಾಗೂ ಮಾನಸೀಕವಾಗಿ ನೊಂದಿದ್ದ ಸುನೀಲ್ ಅವರು ನಿನ್ನೆ ತಮ್ಮ ಜಿಮ್‍ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಜಯಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.










