ಶ್ರೀನಗರ : ಗಡಿಯಲ್ಲಿ ಗಸ್ತು ತಿರುಗುತ್ತಿದ್ದ ಯೋಧರ ಮೇಲೆ ಉಗ್ರರು ನಡೆಸಿದ ಗುಂಡಿನ ದಾಳಿಗೆ ಇಬ್ಬರು ಸಿ.ಆರ್.ಪಿ.ಎಫ್ ಯೋಧರು ಹಾಗೂ ಪೊಲೀಸ್ ಅಧಿಕಾರಿಯೊಬ್ಬರು ಹುತಾತ್ಮರಾಗಿದ್ದಾರೆ. ಯೋಧರು ಜಮ್ಮು ಕಾಶ್ಮೀರಾದ ಬಾರಾಮುಲ್ಲಾ ಜಿಲ್ಲೆಯ ಕೀರಿ ಪ್ರದೇಶದಲ್ಲಿ ಎಂದಿನಂತೆ ಗಸ್ತು ತಿರುಗುತ್ತಿದ್ದ ವೇಳೆ ಉಗ್ರರು ಏಕಾಏಕಿ ಯೋಧರತ್ತ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಸಿ.ಆರ್.ಪಿ.ಎಫ್ ಯೋಧರು ಹಾಗೂ ಓರ್ವ ವಿಶೇಷ ಪೊಲೀಸ್ ಅಧಿಕಾರಿಯನ್ನು ಸೇನಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಮೂವರು ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮರಾಗಿದ್ದು, ಘಟನಾ ಸ್ಥಳದಲ್ಲಿ ಉಗ್ರರಿಗಾಗಿ ಶೋಧಕಾರ್ಯ ಮುಂದುವರೆದಿದೆ ಎಂದು ಸೇನಾ ಮೂಲಗಳಿಂದ ತಿಳಿದು ಬಂದಿದೆ.










