ಚಿಕ್ಕಮಗಳೂರು : ರಾಜ್ಯದಲ್ಲಿ ಹೊಸ ಮದ್ಯದಂಗಡಿಗಳನ್ನು ತೆರೆಯಲು ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಹಿರೇಮಗಳೂರಿನ ಗ್ರಾಮಸ್ಥರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಜಿಲ್ಲಾಧಿಕಾರಿ ಕಛೇರಿಯ ಕಛೇರಿ ಸಹಾಯಕ ಚಂದ್ರಶೇಖರ್ ಅವರನ್ನು ಭೇಟಿ ಮಾಡಿದ ಗ್ರಾಮಸ್ಥರು ಈ ಸಂಬಂಧ ಮನವಿ ಸಲ್ಲಿಸಿದರು.
ಕಳೆದ 1 ವರ್ಷದಿಂದ ಕೊರೋನಾ ವೈರಸ್ನಿಂದಾಗಿ ರಾಜ್ಯಾದ್ಯಂತ ಬಡವರು, ರೈತರು ಕೂಲಿ ಕಾರ್ಮಿಕರು ಆರ್ಥಿಕವಾಗಿ ತತ್ತರಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಹೊಸ ಮದ್ಯದಂಗಡಿಗಳಿಗೆ ಅನುಮತಿ ನೀಡಲು ರಾಜ್ಯ ಸರ್ಕಾರ ಮುಂದಾಗಿರುವುದು ಖಂಡನೀಯ ಎಂದರು.
ರಾಜ್ಯದಲ್ಲಿ ಹೊಸ ಮದ್ಯದಂಗಡಿಗಳನ್ನು ತೆರೆದರೆ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬಡವರು, ಕೂಲಿ ಕಾರ್ಮಿಕರು ಮತ್ತು ರೈತರು ಹಣ ಕಳೆದುಕೊಂಡು ಮತ್ತಷ್ಟು ಸಂಕಷ್ಟಕ್ಕೀಡಾಗುತ್ತಾರೆ, ಅವರ ಕುಟುಂಬಗಳು ಬೀದಿ ಪಾಲಾಗಬೇಕಾಗುತ್ತವೆ ಎಂದು ಎಚ್ಚರಿಸಿದರು.
ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಹೊಸ ಮದ್ಯದಂಗಡಿಗಳಿಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿದ ಗ್ರಾಮಸ್ಥರು ಅನುಮತಿ ನೀಡಿದಲ್ಲಿ ಹೋರಾಟ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದರು.
ಗ್ರಾಮಸ್ಥರಾದ ಹಿರೇಮಗಳೂರು ರಾಮಚಂದ್ರ, ಹೆಚ್.ಎಸ್.ರವಿಕುಮಾರ್, ಧರ್ಮರಾಜ್, ದೇವರಾಜ್, ಪ್ರಸಾದ್, ಮೋಹನ್ ಕುಮಾರ್ ಹಾಜರಿದ್ದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ರಾಜ್ಯದಲ್ಲಿ ಹೊಸ ಮದ್ಯದಂಗಡಿಗಳನ್ನು ತೆರೆಯಲು ಅನುಮತಿ ನೀಡದಂತೆ ಹಿರೇಮಗಳೂರು ಗ್ರಾಮಸ್ಥರ ಒತ್ತಾಯ…










