ನವದೆಹಲಿ:ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ನಿನ್ನೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ರಾಜ್ಯ ಹಿತಾಸಕ್ತಿಯ ಹಲವು ವಿಷಯಗಳನ್ನು ಚರ್ಚಿಸಿದ್ದಾರೆ. ವಿವಿಧ ನೀರಾವರಿ ಯೋಜನೆಗಳು, ರಾಜ್ಯದ ಬರ ಪರಿಸ್ಥಿತಿ ಹಾಗೂ ಉದ್ಯೋಗ ಖಾತರಿ ಯೋಜನೆಗೆ ಅನುದಾನ ಬಿಡುಗಡೆಗೆ ಸಂಬಂಧಿಸಿದಂತೆ ಚರ್ಚಿಸಿ, ಮನವಿಗಳನ್ನು ಸಲ್ಲಿಸಿದ್ದಾರೆ.
- ಕಾವೇರಿ ಜಲ ವಿವಾದ ನ್ಯಾಯಾಧಿಕರಣದ ಆದೇಶ ಹಾಗೂ ನಂತರ ಸುಪ್ರೀಂ ಕೋರ್ಟಿನಲ್ಲಿ ಮಾರ್ಪಡಿಸಿದ ಆದೇಶಗಳ ಅನ್ವಯ ತಮಿಳುನಾಡಿಗೆ ಪ್ರತಿ ತಿಂಗಳು ನೀರು ಹರಿಸುವುದನ್ನು ಕ್ರಮಬದ್ಧವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಮೇಕೆದಾಟು ಯೋಜನೆಯು ನೆರವಾಗಲಿದೆ. ಈ ಯೋಜನೆಯು ಸುಮಾರು 67 ಟಿಎಂಸಿ ಸಾಮರ್ಥ್ಯ ಹೊಂದಿದ್ದು, ಸುಪ್ರೀಂ ಕೋರ್ಟ್ ಬೆಂಗಳೂರಿಗೆ ಹೆಚ್ಚುವರಿಯಾಗಿ ಹಂಚಿಕೆ ಮಾಡಿರುವ 4..75 ಟಿಎಂಸಿ ನೀರನ್ನು ಬಳಸಿಕೊಳ್ಳಲು ಹಾಗೂ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲು ಉದ್ದೇಶಿಸಲಾಗಿದೆ. ಇದಕ್ಕೆ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರಧಾನಮಂತ್ರಿಯವರು ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ.
- ಕೃಷ್ಣಾ ನ್ಯಾಯಾಧಿಕರಣ-2ರ ಅಡಿ ಕರ್ನಾಟಕಕ್ಕೆ ನೀರಾವರಿ ಉದ್ದೇಶಕ್ಕೆ 166 ಟಿಎಂಸಿ ನೀರು ಹಂಚಿಕೆಯಾಗಿದ್ದು, ಈ ನೀರಿನ ಬಳಕೆಗಾಗಿ ಕೃಷ್ಣ ಮೇಲ್ದಂಡೆ ಯೋಜನೆ- ಹಂತ 3 ಮತ್ತಿತರ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಸರ್ಕಾರ ಈಗಾಗಲೇ ಈ ಯೋಜನೆಗಳಿಗೆ ಸಾಕಷ್ಟು ಹಣ ಹೂಡಿಕೆ ಮಾಡಿದ್ದು, ನ್ಯಾಯಾಧಿಕರಣದ ತೀರ್ಪು ನೀಡಿ 5 ವರ್ಷ ಕಳೆದರೂ ಇನ್ನೂ ಗೆಜೆಟ್ ಅಧಿಸೂಚನೆ ಹೊರಡಿಸಿಲ್ಲ. ಇದರಿಂದ ರಾಜ್ಯಕ್ಕೆ ಹಂಚಿಕೆಯಾದ ನೀರಿನ ಪಾಲನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಈ ಅಧಿಸೂಚನೆಯನ್ನು ಶೀಘ್ರವೇ ಹೊರಡಿಸುವಂತೆ ಮನವಿ ಮಾಡಿದ್ದಾರೆ.
- ಮಹದಾಯಿ ಜಲ ವಿವಾದ ನ್ಯಾಯಾಧಿಕರಣವು ತನ್ನ ಅಂತಿಮ ಆದೇಶದಲ್ಲಿ ಕರ್ನಾಟಕಕ್ಕೆ 13.42 ಟಿಎಂಸಿ ನೀರು ಹಂಚಿಕೆ ಮಾಡಿದ್ದು, ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳು ಹಾಗೂ ಈ ಮಾರ್ಗದಲ್ಲಿರುವ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆಗೆ ಬಹುಕಾಲದಿಂದ ನೆನೆಗುದಿಗೆ ಬಿದ್ದಿರುವ ಕಳಸಾ ಬಂಡೂರಿ ನಾಲಾ ಯೋಜನೆ ಮತ್ತು ಇತರ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ನೀರು ಹಂಚಿಕೆಯ ಗೆಜೆಟ್ ನೋಟಿಫಿಕೇಷನ್ ಶೀಘ್ರವೇ ಹೊರಡಿಸುವಂತೆ ಮನವಿ ಮಾಡಿದ್ದಾರೆ.
- ಕೃಷ್ಣಾ ಮೇಲ್ದಂಡೆ ಯೋಜನೆ- ಮೂರನೇ ಹಂತವನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸುವಂತೆ ಮಾನ್ಯ ಪ್ರಧಾನಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಈ ಯೋಜನೆಯಿಂದ ಉತ್ತರ ಕರ್ನಾಟಕದ ವಿಜಯಪುರ, ರಾಯಚೂರು, ಕಲಬುರಗಿ, ಯಾದಗಿರಿ,, ಕೊಪ್ಪಳ ಹಾಗೂ ಬಾಗಲಕೋಟೆ ಜಿಲ್ಲೆಗಳ 5.30 ಲಕ್ಷ ಹೆಕ್ಟೇರ್‍ಗೂ ಹೆಚ್ಚು ಪ್ರದೇಶದ ನೀರಾವರಿ ಸೌಲಭ್ಯ ಒದಗಿಸುವ ನಿರೀಕ್ಷೆ ಇದ್ದು, ಇದು ರಾಷ್ಟ್ರೀಯ ಯೋಜನೆಯ ಮಾನದಂಡಕ್ಕಿಂತ ಹೆಚ್ಚಾಗಿದೆ. ಈ ಯೋಜನೆಯ ಅಂದಾಜು ವೆಚ್ಚ 51,148 ಕೋಟಿ ರೂ. ಗಳಾಗಿದ್ದು, ರಾಜ್ಯದ ಸಂಪನ್ಮೂಲವೊಂದರಿಂದಲೇ ಭರಿಸಿದರೆ ಯೋಜನೆ ಅನುಷ್ಠಾನದಲ್ಲಿ ವಿಳಂಬವಾಗಬಹುದು. ಭೂಸ್ವಾಧೀನಕ್ಕೆ ಇಂದು ಅತಿ ಹೆಚ್ಚು ಅನುದಾನದ ಅಗತ್ಯವಿರುವುದರಿಂದ ಇದನ್ನು ರಾಷ್ಟ್ರೀಯ ಯೋಜನೆಯೆಂದು ಘೋಷಿಸುವಂತೆ ಜಲಸಂಪನ್ಮೂಲ ಸಚಿವಾಲಯಕ್ಕೆ ಸೂಚನೆ ನೀಡುವಂತೆ ಪ್ರಧಾನಿಗಳಿಗೆ ಮನವಿ ಸಲ್ಲಿಸಿದ್ದಾರೆ.
- ಬರ ಪರಿಸ್ಥಿತಿಯಿಂದ ಕಂಗಾಲಾಗಿರುವ ರೈತರಿಗೆ ಎನ್‍ಡಿಆರ್‍ಎಫ್ ಮಾನದಂಡಗಳನ್ವಯ ಶೇ. 33ಕ್ಕೂ ಹೆಚ್ಚು ನಷ್ಟ ಅನುಭವಿಸಿದ ರೈತರಿಗೂ ಇನ್‍ಪುಟ್ ಸಬ್ಸಿಡಿ ನೀಡುವಂತೆ ಹಾಗೂ ಎನ್‍ಡಿಆರ್‍ಎಫ್ ಅಡಿ ಮುಂಗಾರು ಹಂಗಾಮಿನ ಬರ ಪರಿಹಾರ ಅನುದಾನವನ್ನು ಶೀಘ್ರವೇ ಬಿಡುಗಡೆ ಮಾಡುವಂತೆ ಪ್ರಧಾನ ಮಂತ್ರಿಯವರನ್ನು ಮನವಿ ಮಾಡಿದ್ದಾರೆ.
- ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ತಲೆದೋರಿದ್ದು, ಮುಂಗಾರು ಹಂಗಾಮಿನಲ್ಲಿ ಕೃಷಿ ಮತ್ತು ತೋಟಗಾರಿಕಾ ವಲಯಗಳಲ್ಲಿ 16,662.48 ಕೋಟಿ ರೂ. ನಷ್ಟವಾಗಿದ್ದು, ಎಸ್‍ಡಿಆರ್‍ಎಫ್ ಮಾನದಂಡಗಳ ಪ್ರಕಾರ ಕೇಂದ್ರದಿಂದ 2434 ಕೋಟಿ ರೂ. ಪರಿಹಾರಕ್ಕೆ ಮನವಿ ಸಲ್ಲಿಸಿದ್ದಾರೆ.
- ಆದರೆ ಬರ ನಿರ್ವಹಣೆ ಕುರಿತ ಕೈಪಿಡಿಗೆ ಇತ್ತೀಚೆಗೆ ಮಾಡಿರುವ ತಿದ್ದುಪಡಿಯನ್ವಯ ಕೇವಲ ಶೇ. 50ಕ್ಕೂ ಹೆಚ್ಚು ಬೆಳೆ ನಷ್ಟ ಹೊಂದಿದವರಿಗೆ ಮಾತ್ರ ಇನ್‍ಪುಟ್ ಸಬ್ಸಿಡಿ ನೀಡಲು ಅವಕಾಶವಿದೆ. ಇದರಿಂದ ಶೇ. 33 ರಿಂದ ಶೇ. 50 ರಷ್ಟು ಬೆಳೆ ನಷ್ಟ ಹೊಂದಿದ ರೈತರು ಇನ್‍ಪುಟ್ ಸಬ್ಸಿಡಿಯಿಂದ ವಂಚಿತರಾಗುತ್ತಾರೆ. ಈ ಕ್ರಮದಿಂದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಯಾವುದೇ ಪರಿಹಾರ ದೊರಕದಂತಾಗುತ್ತದೆ ಹಾಗೂ ಅವರಿಗೆ ತಾರತಮ್ಯ ಮಾಡಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಶೇ. 33ಕ್ಕೂ ಹೆಚ್ಚು ನಷ್ಟ ಅನುಭವಿಸಿದ ರೈತರಿಗೂ ಇನ್‍ಪುಟ್ ಸಬ್ಸಿಡಿ ನೀಡಲು ಸಂಬಂಧಿಸಿದವರಿಗೆ ನಿರ್ದೇಶನ ನೀಡುವಂತೆ ಮಾಡಿದ್ದಾರೆ.
- ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಹಿಂದಿನ ಬಾಕಿ ಸೇರಿ ರಾಜ್ಯಕ್ಕೆ ಒಟ್ಟು 2538 ಕೋಟಿ ರೂ. ಅನುದಾನ ಬರಬೇಕಾಗಿದೆ. ಇದನ್ನು ಶೀಘ್ರವೇ ಬಿಡುಗಡೆ ಮಾಡಲು ಕ್ರಮ ವಹಿಸುವಂತೆ ಮಾನ್ಯ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.
- 2015-16 ಹಾಗೂ 2016-17 ರಲ್ಲಿ ಕೇಂದ್ರದ ಪಾಲಿನ ಅನುದಾನ ಸುಮಾರು 2175 ಕೋಟಿ ರೂ. ಗಳಷ್ಟು ರಾಜ್ಯ ಸರ್ಕಾರವೇ ಭರಿಸಿತ್ತು. ಇದರಲ್ಲಿ 935.51 ಕೋಟಿ ರೂ. ಬಾಕಿ ಇದೆ. ಜೊತೆಗೆ 2017-18 ಹಾಗೂ 2018-19 ನೇ ಸಾಲಿನ ಈ ವರೆಗಿನ ಬಾಕಿ 539.75 ಕೋಟಿ ರೂ. ಹಾಗೂ 2018-19 ನೇ ಸಾಲಿನ ಅಂತ್ಯದ ವರೆಗೆ 8.50 ಕೋಟಿ ಮಾನವ ದಿನಗಳ ಸೃಜನೆಗೆ 11.96.08 ಕೋಟಿ ರೂ. ಅನುದಾನ ಅಗತ್ಯವಿದೆ ಎಂದು ತಿಳಿಸಿದ್ದಾರೆ.
- ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಜನರು ಗುಳೆ ಹೋಗುವುದನ್ನು ತಡೆಯಲು ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯು ಅಗತ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯಕ್ಕೆ 2538 ಕೋಟಿ ರೂ. ಗಳನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ ಎಂದು ಟ್ವಿಟ್ ಮೂಲಕ ತಿಳಿಸಿಲಾಗಿದೆ.










