ಚಿಕ್ಕಮಗಳೂರು : ಸ್ವಾತಂತ್ರ ಪೂರ್ವ ಮತ್ತು ನಂತರದ ದಿನಗಳಲ್ಲಿ ಹಲವು ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿ ದೇಶಕ್ಕೆ ಸಂಸದೀಯ ಪ್ರಜಾಪ್ರಭುತ್ವದ ಭದ್ರ ಬುನಾದಿಯನ್ನು ಹಾಕಿಕೊಟ್ಟ ಕೀರ್ತಿ ಕಾಂಗ್ರೇಸ್‍ಗೆ ಸಲ್ಲುತ್ತದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಹೇಳಿದರು.
ಕಾಂಗ್ರೇಸ್ ಪಕ್ಷ ಜಿಲ್ಲಾದ್ಯಂತ ಹಮ್ಮಿಕೊಂಡಿರುವ ಜನಸಂಪರ್ಕ ಅಭಿಯಾನಕ್ಕೆ ಶನಿವಾರ ನಗರದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು ಕಾಂಗ್ರೇಸ್ ಕೇವಲ ಒಂದು ರಾಜಕೀಯ ಪಕ್ಷವಲ್ಲ ಅದು ಜನಪರ ಆಂದೋಲನವಾಗಿದೆ ಎಂದರು.
ಆರು ದಶಕಗಳಿಗೂ ಹೆಚ್ಚು ಕಾಲ ದೇಶವನ್ನು ಮುನ್ನಡೆಸಿರುವ ಕಾಂಗ್ರೇಸ್ ಪಕ್ಷ ರಾಷ್ಟ್ರಕ್ಕೆ ಸಾಮಾಜಿಕ ಶೈಕ್ಷಣಿಕ, ಮತ್ತು ಆರ್ಥಿಕ ಸಧೃಡತೆಯನ್ನು ತಂದು ಕೊಟ್ಟಿದೆ ಎಂದು ತಿಳಿಸಿದರು.
ಉದ್ಘಾಟನಾ ಸಮಾರಂಭದ ನಂತರ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ನಗರದ ಚೊಕ್ಕಣ್ಣ ಬೀದಿ, ನಾಯ್ಡು ಬೀದಿ, ಬೆಲ್ಟ್ ರಸ್ತೆ, ಉಂಡೇದಾಸರಹಳ್ಳಿಯ ಮನೆಮನೆಗೆ ತೆರಳಿ ಕಾಂಗ್ರೇಸ್ ನೇತೃತ್ವದ ಸರ್ಕಾರದ ಸಾಧನೆ ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ವಿವರಿಸಿದರು.
ಜಿಲ್ಲಾ ಕಾಂಗ್ರೇಸ್ ಉಪಾಧ್ಯಕ್ಷ ಕೆ.ಎಸ್.ಶಾಂತೇಗೌಡ, ಮುಖಂಡರಾದ ವಸಂತಾ ರಾಮಚಂದ್ರ, ಆನಂದ್, ಮಂಜು, ಯೋಗೀಶ್, ನಗರಸಭೆ ಮಾಜಿ ಸದಸ್ಯ ರಾಮಣ್ಣ, ಎಪಿಎಂಸಿ ಅಧ್ಯಕ್ಷ ಅರೇನಳ್ಳಿ ಪ್ರಕಾಶ್ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.










