ಚಿಕ್ಕಮಗಳೂರು : ದೇಶದ ಪ್ರಗತಿಯ ದೃಷ್ಠಿಯಿಂದ ಎಲ್ಲರೂ ಭಾವೈಕ್ಯತೆಯನ್ನು ಮೆರೆಯಬೇಕು ಎಂದು ರೈತ ಸಂಘದ ಮುಖಂಡ ಗುರುಶಾಂತಪ್ಪ ಸಲಹೆ ಮಾಡಿದರು.
ನಗರದ ಆಜಾದ್‍ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಶನಿವಾರ ನಡೆದ ಭಾರತ ಸೇವಾದಳ ದಿನಾಚರಣೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಾರತ ಅನೇಕತೆಯಲ್ಲಿ ಏಕತೆಯನ್ನು ಸಾಧಿಸಿದ ರಾಷ್ಟ್ರ, ಇಲ್ಲಿ ಅನೇಕ ಜಾತಿ, ಧರ್ಮ ಮತ್ತು ಮತಗಳಿವೆ ಅವೆಲ್ಲವೂ ಒಂದಾಗಿ ಸಾಗುತ್ತಿರುವುದು ದೇಶದ ಹೆಗ್ಗಳಿಕೆಯಾಗಿದೆ ಎಂದ ಅವರು ಆದರೆ ಇತ್ತೀಚಿನ ವರ್ಷಗಳಲ್ಲಿ ಸೌಹಾರ್ದತೆ ಮತ್ತು ಸಾಮರಸ್ಯತೆ ಮರೆಯಾಗುತ್ತಿದೆ ಇದರಿಂದಾಗಿ ಅಭಿವೃದ್ದಿ ಕುಂಠಿತವಾಗುತ್ತಿದೆ ಎಂದರು.
ದೇಶದಲ್ಲಿರುವ ಎಲ್ಲಾ ಜಾತಿ, ಮತ ಮತ್ತು ಧರ್ಮಗಳ ಜನರೂ ನಾವು ಭಾರತೀಯರೆಂಬುದನ್ನು ಮನಗಾಣಬೇಕು, ಪರಸ್ಪರ ಸೌಹಾರ್ದದಿಂದ ಬದುಕಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಜಗದೀಶಾಚಾರ್ ಮಾತನಾಡಿ ಎಲ್ಲಾ ಜಾತಿ, ಮತ ಮತ್ತು ಧರ್ಮಗಳ ಜನರೂ ಪರಸ್ಪರ ಸೌಹಾರ್ದತೆಯಿಂದ ಬಾಳಿದರೆ ಮಾತ್ರ ದೇಶದ ಅಭಿವೃದ್ದಿ ಸಾಧ್ಯವಾಗುತ್ತದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಭಾರತ ಸೇವಾದಳದ ತಾಲ್ಲೂಕು ಸಂಘಟಕ ಎಸ್.ಇ.ಲೋಕೇಶ್ವರಾಚಾರ್ ವಿದ್ಯಾರ್ಥಿಗಳು ಮತ್ತು ಯುವ ಜನತೆಯಲ್ಲಿ ರಾಷ್ಟ್ರಭಕ್ತಿ ಹಾಗೂ ದೇಶಪ್ರೇಮವನ್ನು ಬೆಳೆಸಲು ಸೇವಾದಳ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಸೇವಾದಳ ದಿನಾಚರಣೆ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಮುಖ್ಯ ಶಿಕ್ಷಕಿ ಬಿ.ಆರ್.ಗೀತಾ ಅಧ್ಯಕ್ಷತೆ ವಹಿಸಿದ್ದರು, ಸೇವಾದಳದ ಜಿಲ್ಲಾ ಕಾರ್ಯದರ್ಶಿ ಎಂ.ಹಂಪಯ್ಯ, ಸದಸ್ಯ ಶಾಂತಕುಮಾರ್, ಅಂಬೇಡ್ಕರ್ ಶಾಲೆಯ ಕಾರ್ಯದರ್ಶಿ ಬಸವರಾಜ್ ಉಪಸ್ಥಿತರಿದ್ದರು.










