ಮೂಡಿಗೆರೆ: ರೈತರ ನೆರವಿಗಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರೈತರ ಕುಟುಂಬಕ್ಕೆ 6 ಸಾವಿರ ರೂ. ಖಾತೆಗೆ ಜಮಾ ಮಾಡುವ ಯೋಜನೆಯು ಘೋಷಣೆಯಾಗಿದ್ದು, ಇದಕ್ಕಾಗಿ ರೈತರು ಬ್ಯಾಂಕ್ ಖಾತೆ ನಕಲು, ಪಹಣಿಯನ್ನು ಕೃಷಿ ಇಲಾಖೆಗೆ ನೀಡಬೇಕಾಗಿದ್ದು, ಈ ಹಿನ್ನೆಲೆ ರೈತರು ತಮ್ಮ ದೈನಂದಿನ ತೋಟ, ಗದ್ದೆಗಳ ಕೆಲಸವನ್ನು ಬಿಟ್ಟು ಪಹಣಿ ಪಡೆಯಲು ಸುತ್ತಮುತ್ತಲಿನ ಹಳ್ಳಿಯಿಂದ ಬಂದು ಮುಂಜಾನೆಯಿಂದ ಸಂಜೆ ಐದು ಗಂಟೆವರೆಗೂ ತಾಲ್ಲೂಕು ಕಛೇರಿಯಲ್ಲಿ ಸರದಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲ್ಲೂಕು ಕಛೇರಿಯಲ್ಲಿ ಒಂದೇ ಪಹಣಿ ಕೌಂಟರ್ ಇದ್ದು, ಪಹಣಿ ನೀಡಲು ವಿಳಂಬವಾಗುತ್ತಿದ್ದು, ಈ ಬಗ್ಗೆ ರೈತರು ತಹಶೀಲ್ದಾರ್ ಬಳಿ ಪಹಣಿ ನೀಡಲು ಇನ್ನೊಂದು ಕೌಂಟರ್ ಮಾಡಿ ಎಂದು ಕೇಳಿದರೆ ತಹಶೀಲ್ದಾರ್ ಉಡಾಫೆಯ ಉತ್ತರ ನೀಡುತ್ತಿದ್ದು, ಸಿಬ್ಬಂದಿಗಳು ಕೂಡ ಇರುವುದು ಒಂದೇ ಕಂಪ್ಯೂಟರ್ ನಮಗೆ ಇರುವುದು ಎರಡೇ ಕೈ ಎಂದು ರೈತರಿಗೆ ಉತ್ತರ ನೀಡುತ್ತಿದ್ದು, ಶಾಸಕರು ಕೂಡ ಈ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಕೆಲವು ರೈತರಿಗೆ ಪಹಣಿ ಸಿಕ್ಕಿದರೆ ಇನ್ನು ಕೆಲವರಿಗೆ ಸಾಫ್ಟ್ ವೇರ್ ಲೋಪದೋಷ ಇರುವುದಾಗಿ ಹೇಳಿ ವಾಪಾಸ್ಸು ಕಳುಹಿಸುತ್ತಿದ್ದು, ರೈತರು ಕಿಸಾನ್ ಸಮ್ಮಾನ್ ಯೋಜನೆಯ 6 ಸಾವಿರವೂ ಬೇಡ, ಈ ಬಿಸಿಲಿನಲ್ಲಿ ನಿಂತು ಪರದಾಡುವುದು ಬೇಡ ಎಂದು ಮನೆಗೆ ತೆರಳುತ್ತಿದ್ದಾರೆ ಎಂದು ಫಸ್ಟ್ ಸುದ್ದಿಗೆ ಜಿಲ್ಲಾ ಕಿಸಾನ್ ಕಾಂಗ್ರೆಸ್ ಕಾರ್ಯಧ್ಯಕ್ಷರಾದ ಬ್ರೀಜೇಶ್ ಕಡಿದಾಳ್ ಅವರು ತಿಳಿಸಿದ್ದಾರೆ.