ರಾಷ್ಟ್ರಕವಿ ಕುವೆಂಪು ಅವರ ಆಶಯದಂತೆ ವಿಶ್ವಮಾನವರಾಗಿ ಬಾಳಬೇಕು ಆಗ ಮಾತ್ರ ಸರ್ವಾಂಗೀಣ ಪ್ರಗತಿ ಸಾಧ್ಯ: ಕುಂದೂರು ಅಶೋಕ್…

592
firstsuddi

ಚಿಕ್ಕಮಗಳೂರು: ದೇಶದ ಪ್ರಗತಿಯ ದೃಷ್ಠಿಯಿಂದ ಎಲ್ಲಾ ಜಾತಿ, ಮತ ಮತ್ತು ಧರ್ಮದವರೂ ತಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಭಾವೈಕ್ಯತೆಯನ್ನು ಮೆರೆಯುವ ಅಗತ್ಯವಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕುಂದೂರು ಅಶೋಕ್ ಹೇಳಿದರು.
ನಗರದ ಆಜಾದ್ ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಭಾರತ ಸೇವಾದಳದ ಜ್ಞಾನಜ್ಯೋತಿ ಘಟಕ ಹಮ್ಮಿಕೊಂಡಿರುವ ರಾಷ್ಟ್ರೀಯ ಭಾವೈಕ್ಯತಾ ಸಪ್ತಾಹಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತ ಅನೇಕತೆಯಲ್ಲಿ ಏಕತೆಯನ್ನು ಸಾಧಿಸಿದ ರಾಷ್ಟ್ರ, ಇಲ್ಲಿ ಅನೇಕ ಜಾತಿ, ಮತ ಮತ್ತು ಧರ್ಮಗಳಿವೆ ಆ ವಿವಿಧತೆಯೇ ನಮ್ಮ ದೇಶದ ಶಕ್ತಿಯಾಗಿದೆ, ನಾವು ತಾಂತ್ರಿಕವಾಗಿ, ವೈಜ್ಞಾನಿಕವಾಗಿ ಬಹಳಷ್ಟು ಮುಂದುವರಿದಿದ್ದೇವೆ, ಆದರೆ ಇತ್ತೀಚಿನ ವರ್ಷಗಳಲ್ಲಿ ಜಾತಿ, ಮತ, ಧರ್ಮ, ನೆಲ, ಜಲ, ಭಾಷೆ, ವಿಷಯದಲ್ಲಿ ಕಚ್ಚಾಡುತ್ತಿದ್ದೇವೆ, ಇದರಿಂದಾಗಿ ದೇಶದ ಪ್ರಗತಿ ಕುಂಠಿತವಾಗುತ್ತಿದೆ ಎಂದು ವಿಷಾದಿಸಿದರು.
ದೇಶದ ಜನತೆ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಅರಿಯಬೇಕು, ಜಾತಿ, ಮತ, ಧರ್ಮಗಳ ನಡುವೆ ಎದ್ದಿರುವ ಅಡ್ಡಗೋಡೆಯನ್ನು ಒಡೆದು ಒಂದಾಗಿ ಬಾಳುವತ್ತ ಚಿಂತಿಸಬೇಕು, ರಾಷ್ಟ್ರಕವಿ ಕುವೆಂಪು ಅವರ ಆಶಯದಂತೆ ವಿಶ್ವಮಾನವರಾಗಿ ಬಾಳಬೇಕು ಆಗ ಮಾತ್ರ ರಾಷ್ಟ್ರದ ಸರ್ವಾಂಗೀಣ ಪ್ರಗತಿ ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.
ಸೇವಾದಳದ ಜಿಲ್ಲಾ ಖಜಾಂಚಿ ಜಗದೀಶಾಚಾರ್ ಮಾತನಾಡಿ ರಾಷ್ಟ್ರೀಯ ಭಾವೈಕ್ಯತೆಯನ್ನು ಬೆಳೆಸುವಲ್ಲಿ ಸೇವಾದಳ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಭಾರತ ಸೇವಾದಳದ ತಾಲ್ಲೂಕು ಸಂಘಟಕ ಎಸ್.ಇ.ಲೋಕೇಶ್ವರಾಚಾರ್, ಸೇವಾದಳ ಕಳೆದ 26 ವರ್ಷಗಳಿಂದ ರಾಷ್ಟ್ರೀಯ ಭಾವೈಕ್ಯತಾ ಸಪ್ತಾಹವನ್ನು ನಡೆಸುತ್ತಾ ಬಂದಿದ್ದು, ಸಪ್ತಾಹದ ಅಂಗವಾಗಿ ಏಳು ದಿನಗಳ ಕಾಲ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಗುವುದು, ವಿಜೇತರಿಗೆ ಸಮಾರೋಪ ಸಮಾರಂಭದಲ್ಲಿ ಬಹುಮಾನ ಮತ್ತು ಪ್ರಮಾಣ ಪತ್ರವನ್ನು ನೀಡಲಾಗುವುದು ಎಂದು ತಿಳಿಸಿದರು.
ಸೇವಾದಳದ ಜಿಲ್ಲಾ ಕಾರ್ಯದರ್ಶಿ ಹಂಪಯ್ಯ, ಮಾತನಾಡಿ ಮಕ್ಕಳು ಎಳೆಯ ವಯಸ್ಸಿನಿಂದಲೇ ಭಾವೈಕ್ಯತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಶಾಲೆಯ ಮುಖ್ಯ ಶಿಕ್ಷಕಿ ಬಿ.ಆರ್.ಗೀತಾ ಅಧ್ಯಕ್ಷತೆ ವಹಿಸಿದ್ದರು, ಶಿಕ್ಷಕಿಯರಾದ ನಾಗವೇಣಿ, ಸಾವಿತ್ರಿ ಉಪಸ್ಥಿತರಿದ್ದರು.