ನವದೆಹಲಿ : ಮಹಾಮಾರಿ ಕೊರೊನಾ ವೈರಸ್ ಅಟ್ಟಹಾಸದಿಂದ ಇಡೀ ವಿಶ್ವವೇ ಕಂಗಾಲಾಗಿದ್ದು, ಇದರಿಂದ ಹೊರ ಬರಲು ದೇಶಗಳು ಹರಸಾಹಸ ಪಡುತ್ತಿವೆ. ಈ ನಡುವೆ ಕದನ ವಿರಾಮ ಉಲ್ಲಂಘಿಸಿ ಗಡಿಯಲ್ಲಿ ನಿರಂತರವಾಗಿ ಗುಂಡಿನ ದಾಳಿ ನಡೆಸುತ್ತಿರುವ ಪಾಕ್ ಸೈನಿಕರು ಹಾಗೂ ಉಗ್ರರಿಗೆ ಭಾರತೀಯ ಸೈನಿಕರು ತಕ್ಕ ಪಾಠ ಕಲಿಸಿದ್ದಾರೆ. ಏಪ್ರಿಲ್ 10ರಂದು ಜಮ್ಮು ಕಾಶ್ಮೀರಾದ ಕುಪ್ವಾರಾ ಜಿಲ್ಲೆಯ ಕೇರನ್ ಸೆಕ್ಟರ್ ಬಳಿ ಗಡಿ ದಾಟಿ ಒಳನುಗ್ಗಿದ ಪಾಕ್ ಸೈನಿಕರು ಹಾಗೂ ಉಗ್ರರು ಭಾರತೀಯ ಯೋಧರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿಯನ್ನು ನಡೆಸಿದ್ದರು. ಈ ದಾಳಿಯಲ್ಲಿ ಐವರು ಭಾರತೀಯ ಯೋಧರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತಿಯಾಗಿ ದಾಳಿ ನಡೆಸಿದ ಭಾರತೀಯ ಯೋಧರು 15ಮಂದಿ ಪಾಕ್ ಸೈನಿಕರು ಹಾಗೂ 8ಮಂದಿ ಉಗ್ರರು ಹಾಗೂ ಇಬ್ಬರು ಸೆಕ್ಯುರಿಟಿ ಸಿಬ್ಬಂಧಿಯನ್ನು ಹೊಡೆದುರುಳಿಸುವ ಮೂಲಕ ಪಾಕ್‍ಗೆ ಮುಟ್ಟಿಕೊಳ್ಳುವ ರೀತಿಯಲ್ಲಿ ತಿರುಗೇಟು ನೀಡಿದ್ದಾರೆ. ಅಲ್ಲದೇ ಈ ದಾಳಿಯಲ್ಲಿ 15 ವರ್ಷದ ಬಾಲಕಿ ಹಾಗೂ ನಾಲ್ವರು ನಾಗರೀಕರು ಗಾಯಗೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.










