ಸರ್ವಶಿಕ್ಷಣ ಅಭಿಯಾನ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆಯಬಾರದೆಂದು ಜಿಲ್ಲಾ ಪಂಚಾಯಿತಿ ಸಿ.ಇ.ಒ ಎಸ್.ಅಶ್ವತಿ ಅವರಿಗೆ ಮನವಿ…

440
firstsuddi

ಚಿಕ್ಕಮಗಳೂರು: ಸರ್ವಶಿಕ್ಷಣ ಅಭಿಯಾನ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರನ್ನು ಯಾವುದೇ ಕಾರಣಕ್ಕೂ ಕೆಲಸದಿಂದ ತೆಗೆಯಬಾರದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಪಂಚಾಯಿತಿಯನ್ನು ಒತ್ತಾಯಿಸಿದೆ.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಅಶ್ವತಿ ಅವರನ್ನು ಶುಕ್ರವಾರ ಹೊರ ಗುತ್ತಿಗೆ ನೌಕರರೊಂದಿಗೆ ಭೇಟಿ ಮಾಡಿದ ಸಮಿತಿಯ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.
ನಗರದ ಉನ್ನತಿ ಎಂಟರ್ ಪ್ರೈಸಸ್ ವತಿಯಿಂದ ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಹೊರಗುತ್ತಿಗೆ ಆಧಾರದಲ್ಲಿ 8 ರಿಂದ 10 ಜನ ಕಳೆದ 11 ವರ್ಷಗಳಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗಳಲ್ಲಿ ಡಿ ಗ್ರೂಪ್ ನೌಕರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಇದೀಗ ಏಕಾಏಕಿ ಅವರನ್ನು ಕೆಲಸದಿಂದ ತೆಗೆಯುವಂತೆ ಆದೇಶ ಮಾಡಿದ್ದು, ಇದರಿಂದಾಗಿ ಆ ನೌಕರರ ಕುಟುಂಬಗಳು ಬೀದಿ ಪಾಲಾಗುವ ಸ್ಥಿತಿಯಲ್ಲಿವೆ ಎಂದು ದೂರಿದರು.
11 ವರ್ಷಗಳಿಂದ ಸರ್ಕಾರಿ ಕೆಲಸವನ್ನೇ ನೆಚ್ಚಿಕೊಂಡು ತಮ್ಮ ಬದುಕನ್ನು ಕಟ್ಟಿಕೊಂಡಿರುವ ನೌಕರರನ್ನು ಕೆಲಸದಿಂದ ತೆಗೆದರೆ ಅವರು ಅತಂತ್ರರಾಗುತ್ತಾರೆ ಎಂದ ಪದಾಧಿಕಾರಿಗಳು ಈ ಹಿನ್ನೆಲೆಯಲ್ಲಿ ಅವರನ್ನು ಅದೇ ಕೆಲಸದಲ್ಲಿ ಮುಂದುವರಿಸಬೇಕು ಅಥವಾ ಬದಲಿ ಇಲಾಖೆಗೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.
ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದರು. ಮನವಿಗೆ ಪ್ರತಿಕ್ರಿಯಿಸಿದ ಸಿಇಒ ಅಶ್ವತಿ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಸಮಿತಿಯ ಜಿಲ್ಲಾ ಸಂಚಾಲಕ ಮರ್ಲೆ ಅಣ್ಣಯ್ಯ ಸಂಘಟನಾ ಸಂಚಾಲಕರಾದ ಎಸ್.ಎನ್.ಮಹೇಂದ್ರಸ್ವಾಮಿ, ಮೋಹನ್, ಖಜಾಂಚಿ ಆರ್.ಶೇಖರ್, ಕೊಪ್ಪಾ ತಾಲ್ಲೂಕು ಮಹಿಳಾ ಘಟಕದ ಸಂಚಾಲಕಿ ಸುಶೀಲಮ್ಮ, ನೌಕರರಾದ ಆಶಾ, ಚೆನ್ನಬಸಪ್ಪ, ರಾಜಪ್ಪ, ಶರಣ್, ಸಂದೀಪ್ ಹಾಜರಿದ್ದರು.