ಚಿಕ್ಕಮಗಳೂರು : ಮನೆ ಅಂಗಳದಲ್ಲಿ ಬೃಹತ್ ಗಾತ್ರದ ಎರಡು ಕಾಡುಕೋಣ ಕಂಡು ಮನೆ ಮಾಲೀಕರು ಭಯಗೊಂಡಿರುವ ಘಟನೆ ಕೊಪ್ಪ ತಾಲೂಕಿನ ಎಮ್ಮೆಗೊಂಡ ಗ್ರಾಮದಲ್ಲಿ ನಡೆದಿದೆ. ರಾಜು ಎಂಬುವವರ ಮನೆ ಅಂಗಳದಲ್ಲಿ ಬೃಹತ್ ಗಾತ್ರದ ಎರಡು ಕಾಡುಕೋಣ ಪ್ರತ್ಯಕ್ಷವಾಗಿದ್ದು, ಕಾಡುಕೋಣಗಳನ್ನು ಕಂಡು ಅವರು ಭಯಗೊಂಡಿದ್ದಾರೆ. ಕಳೆದ ಒಂದು ವರ್ಷದಿಂದ ಕೊಪ್ಪ ತಾಲೂಕಿನ ಗುಡ್ಡೇತೋಟ, ಕೌವನಹಳ್ಳಿ, ಚನ್ನೇಕಳ್ಳು, ಬಸರೀಕಟ್ಟೆ ಗ್ರಾಮದಲ್ಲಿ ಕಾಡುಕೋಣ ಕಾಣಿಸಿಕೊಳ್ಳತ್ತಿತ್ತು. ಕಾಡುಕೋಣ ದಾಳಿಗೆ ಕಳೆದ ಒಂದು ತಿಂಗಳ ಹಿಂದೆ ಗುಡ್ಡೇತೋಟದ ಮಂಜುನಾಥ ಭಟ್ ಎಂಬುವರರು ಮೃತಪಟ್ಟಿದ್ದರು. ಹಗಲು, ರಾತ್ರಿ ಗ್ರಾಮಸ್ಥರು ಆತಂಕದಿಂದ ಓಡಾಡುವ ಪರಿಸ್ಥಿತಿ ಉಂಟಾಗಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದ್ದು, ಕಾಡುಕೋಣ ದಾಳಿಗೆ ಬೇಸತ್ತು ಮತದಾನ ಬಹಿಷ್ಕಾರದ ಚಿಂತನೆಯನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ.










