ಬೆಂಗಳೂರು: ಟಿ.ನರಸೀಪುರದ ತಿರುಮಕೂಡಲು ತ್ರಿವೇಣಿ ಸಂಗಮದಲ್ಲಿ ಫೆಬ್ರವರಿ 17 ರಿಂದ ನಡೆಯುವ ಕುಂಭಮೇಳ ಕಾರ್ಯಕ್ರಮ ಕರ್ನಾಟಕದ ಘನತೆ ಹೆಚ್ಚಿಸುವಂತೆ ನಡೆಯಬೇಕೆಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತಿಳಿಸಿದರು.ಕುಂಭಮೇಳ ಕುರಿತು ಬುಧವಾರ ಬೆಂಗಳೂರಿನ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಧಾರ್ಮಿಕ ಮುಖಂಡರು, ರಾಜಕೀಯ ಗಣ್ಯರು ಹಾಗೂ ಅಧಿಕಾರಿಗಳ ಸಭೆ ನಡೆಸಿದರು.ಕಾವೇರಿ, ಕಪಿಲಾ, ಸ್ಫಟಿಕ ಸರೋವರಗಳ ತ್ರಿವೇಣಿ ಸಂಗಮದಲ್ಲಿ ನಡೆಯುವ ಕುಂಭಮೇಳ ಅತ್ಯಂತ ದೊಡ್ಡ ಮಟ್ಟದಲ್ಲಿ ನಡೆಯಬೇಕು. ನಮ್ಮ ಧಾರ್ಮಿಕ ಸಂಸ್ಕೃತಿ ಹಾಗೂ ಸಂಪ್ರದಾಯಗಳ ಪ್ರತೀಕವಾಗಿ ಇಂತಹ ಕಾರ್ಯಕ್ರಮಗಳು ಅಗತ್ಯ ಎಂದರು.ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಈ ಕುಂಭಮೇಳಕ್ಕೆ ಶಾಶ್ವತವಾದ ಮೂಲ ಸೌಕರ್ಯಗಳ ಒದಗಿಸಲು ಗಮನಹರಿಸಬೇಕು. ಪ್ರವಾಸೋದ್ಯಮ ಇಲಾಖೆಯಿಂದ ಈ ಕ್ಷೇತ್ರದಲ್ಲಿ ಶಾಶ್ವತವಾದ ಅಭಿವೃದ್ಧಿ ಕೆಲಸ ಮಾಡಲು ನೀಲಿನಕ್ಷೆ ತಯಾರಿಸಿ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.
ಸಭೆಯಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಬೆಂಗಳೂರಿನ ಕೈಲಾಸ ಆಶ್ರಮದ ವಿಜಯೇಂದ್ರಪುರಿ ಸ್ವಾಮೀಜಿ, ಓಂಕಾರ ಪೀಠದ ಮಧುಸೂದನಾನಂದ ಸ್ವಾಮೀಜಿ, ಆದಿಚುಂಚನಗಿರಿ ಮಠದ ಸೋಮೇಶ್ವರನಾಥ ಸ್ವಾಮೀಜಿ,ಉನ್ನತ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವರಾದ ಸಾ.ರಾ. ಮಹೇಶ್, ಸಣ್ಣ ನೀರಾವರಿ ಸಚಿವರಾದ ಸಿ.ಎಸ್. ಪುಟ್ಟರಾಜು, ಸಾರಿಗೆ ಸಚಿವರಾದ ಡಿ.ಸಿ.ತಮ್ಮಣ್ಣ, ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್, ಶಾಸಕರಾದ ಡಾ| ಯತೀಂದ್ರ ಸಿದ್ದರಾಮಯ್ಯ, ಅಶ್ವಿನ್ ಕುಮಾರ್, ಅಡಗೂರು ಹೆಚ್.ವಿಶ್ವನಾಥ್, ಸುರೇಶ್‍ಗೌಡ, ನಾರಾಯಣಗೌಡ, ಶ್ರೀನಿವಾಸ್, ಅನ್ನದಾನಿ, ರವೀಂದ್ರ ಶ್ರೀಕಂಠೇಗೌಡ, ಲೋಕಸಭಾ ಸದಸ್ಯರಾದ ಎಲ್.ಆರ್.ಶಿವರಾಮೇಗೌಡ, ವಿಧಾನ ಪರಿಷತ್ ಸದಸ್ಯರಾದ ಅಪ್ಪಾಜಿಗೌಡ, ಪೊಲೀಸ್ ಅಧೀಕ್ಷಕರಾದ ಅಮಿತ್ ಸಿಂಗ್ ಉಪಸ್ಥಿತರಿದ್ದರು.










