ಮೂಡಿಗೆರೆ: ಹಸಿವಿನಿಂದ ಯಾರು ಇರಬಾರದು, ಹಸಿವು ಮುಕ್ತ ಕರ್ನಾಟಕ ಮಾಡಬೇಕು ಎಂಬ ಉದ್ದೇಶದಿಂದ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಬಡವರಿಗೆ ಅನುಕೂಲವಾಗಲೆಂದು ಇಂದಿರಾ ಕ್ಯಾಂಟೀನ್ ನಲ್ಲಿ 5 ರೂಪಾಯಿಗೆ ತಿಂಡಿ, 10 ರೂಪಾಯಿಗೆ ಊಟವನ್ನು ನೀಡಲಾಗುತ್ತಿದ್ದು, ರಾಜ್ಯದ ಸಾಕಷ್ಟು ಬಡ ಜನರು ಇದರ ಉಪಯೋಗವನ್ನು ಪಡೆಯುತ್ತಿದ್ದಾರೆ. ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ನಲ್ಲಿ ಒಂದು ರೀತಿಯ ನೀತಿಯಾದರೆ ಮೂಡಿಗೆರೆ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬರುವ ಇಂದಿರಾ ಕ್ಯಾಂಟೀನ್ ನಲ್ಲಿ ಮಾತ್ರ ಹೊಸದೊಂದು ಕಾನೂನು ಜಾರಿಯಾಗಿದೆ. ರಿಸರ್ವ್ ಬ್ಯಾಂಕ್ 10 ರೂಪಾಯಿಯ ನಾಣ್ಯವನ್ನು ನಿಷೇಧಿಸದಿದ್ದರು ಮೂಡಿಗೆರೆಯ ಇಂದಿರಾ ಕ್ಯಾಂಟೀನ್ ನಲ್ಲಿ 10 ರೂ ನಾಣ್ಯವನ್ನು ನಿಷೇಧಿಸಿದೆ. ಅದೇನೆಂದರೆ ಇಂದಿರಾ ಕ್ಯಾಂಟೀನ್ ಗೆ ಊಟ ಮಾಡುವುದಕ್ಕೆ ಹೋಗುವ ಗ್ರಾಹಕರ ಬಳಿ 10 ರೂಪಾಯಿಯ ನಾಣ್ಯವನ್ನು ನಗದು ಕೌಂಟರ್ ನಲ್ಲಿ ಸ್ವೀಕರಿಸಲಾಗುತ್ತಿಲ್ಲ. 10 ರೂ ನಾಣ್ಯವನ್ನು ಯಾಕೆ ಸ್ವೀಕರಿಸುತ್ತಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸಿದರೆ ಇಂದಿರಾ ಕ್ಯಾಂಟೀನ್ ನ ಮೈಸೂರಿನ ಮುಖ್ಯಸ್ಥರು 10 ರೂ ನಾಣ್ಯವನ್ನು ತೆಗೆದುಕೊಳ್ಳಬಾರದು ಎಂದಿದ್ದರಿಂದ ನಾವು ತೆಗೆದುಕೊಳ್ಳುತ್ತಿಲ್ಲ ಎಂದು ಉಡಾಫೆಯ ಉತ್ತರ ನೀಡುತ್ತಿದ್ದು, ಇಂದಿರಾ ಕ್ಯಾಂಟೀನ್ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.










