ಮೊಹರ್ರಂ-ಉಲ್-ಹರಂ ಮುಜಾವರ್ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ…

203
firstsuddi

ಚಿಕ್ಕಮಗಳೂರು: ತಾಲ್ಲೂಕಿನ ಬಾಬಾಬುಡನ್ ಗಿರಿಯಲ್ಲಿ ಮಾರ್ಚ್ 22 ರಿಂದ ನಡೆಯಲಿರುವ ಉರುಸ್ ಕಾರ್ಯಕ್ರಮವನ್ನು ಹಜರತ್ ಸೈಯದ್ ಗೌಸ್ ಮೊಹಿಯುದ್ದೀನ್ ಶಾಖಾದ್ರಿಯವರ ನೇತೃತ್ವದಲ್ಲಿ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಮೊಹರ್ರಂ-ಉಲ್-ಹರಂ ಮುಜಾವರ್ ಸಮಿತಿ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಜಿಲ್ಲಾಧಿಕಾರಿ ಡಾ|| ಬಗಾಧಿ ಗೌತಂ ಅವರನ್ನು ಸೋಮವಾರ ಭೇಟಿ ಮಾಡಿ ಈ ಸಂಬಂಧ ಮನವಿ ಸಲ್ಲಿಸಿದ ಸಮಿತಿಯ ಪದಾಧಿಕಾರಿಗಳು ಉರುಸ್ ವೇಳೆ ಈ ಹಿಂದೆ ನಡೆಸುತ್ತಿದ್ದಂತೆ ದರ್ಗಾದಲ್ಲಿ ಗಂಧ ಲೇಪಿಸಲು ಮತ್ತು ಹಸಿರು ಬಟ್ಟೆಯನ್ನು ಹಾಕಲು ಅವಕಾಶ ಕಲ್ಪಿಸ ಬೇಕು ಎಂದು ಆಗ್ರಹಿಸಿದರು.
ರಾಜ್ಯ ಉಚ್ಚ ನ್ಯಾಯಾಲಯ ಮುಸ್ಲಿಂ ಸಮುದಾಯದ ಮನವಿಯನ್ನು ಪುರಸ್ಕರಿಸಿ 1947ರ ಪದ್ದತಿಯ ಪ್ರಕಾರ ಶಾಖಾದ್ರಿಯವರ ನೇತೃತ್ವದಲ್ಲಿ ಉರುಸ್ ಕಾರ್ಯಕ್ರಮವನ್ನು ಆಚರಿಸುವಂತೆ ಆದೇಶ ನೀಡಿರುವ ಹಿನ್ನೆಲೆಯಲ್ಲಿ ತಮ್ಮ ಮನವಿಯನ್ನು ಪುರಸ್ಕರಿಸಬೇಕು, ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಮನವಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ|| ಬಗಾಧಿ ಗೌತಂ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಸಮಿತಿಯ ಅಧ್ಯಕ್ಷ ವಜೀರ್ ಅಹಮದ್, ಉಪಾಧ್ಯಕ್ಷ ಸೈಯದ್ ನಸೀರ್, ಅಹಮದ್ ಖಾದ್ರಿ, ಮಹಮದ್ ಹಫೀಜ್, ಅಬ್ದುಲ್ ಕರೀಂ ಹಾಜರಿದ್ದರು.