ಹಿಂದೂ ಸಮಾಜಕ್ಕೆ ಮುಸ್ಲಿಮರು ಮತ್ತು ಕ್ರೈಸ್ತರು ಶತ್ರುಗಳಲ್ಲ : ಭಕ್ತಿ ವಿಕಾಸ ಸ್ವಾಮೀಜಿ…

230
firstsuddi

ಚಿಕ್ಕಮಗಳೂರು : ಅಗಣಿತ ಮಹಿಮ. ಮರ್ಯಾದಾ ಪುರುಷೋತ್ತಮ ಶ್ರೀ ರಾಮನನ್ನು ಕಾಲ್ಪನಿಕ ವ್ಯಕ್ತಿ, ಸಾಮಾನ್ಯ ಮನುಷ್ಯ ಎಂದು ಹೇಳುವುದು ಮೂರ್ಖತನದ ಪರಮಾವಧಿ ಎಂದು ಇಸ್ಕಾನ್ ಸಂಸ್ಥಾಪಕ ಭಕ್ತಿ ವೇದಾಂತ ಸ್ವಾಮಿ ಪ್ರಭುಪಾದರ ಹಿರಿಯ ಶಿಷ್ಯ ಶ್ರೀ ಭಕ್ತಿ ವಿಕಾಸ ಸ್ವಾಮೀಜಿ ಹೇಳಿದರು.
ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ನಡೆದ ಶ್ರೀ ರಾಮನವಮಿ ಉತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ಶ್ರೀರಾಮ ಕಾಲ್ಪನಿಕ ವ್ಯಕ್ತಿ, ಸಾಮಾನ್ಯ ಮನುಷ್ಯ ಎಂಬ ಹೇಳಿಕೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಜಗದ್ಗುರು ಆದಿಶಂಕರಾಚಾರ್ಯರು , ಮಧ್ವಾಚಾರ್ಯರು, ರಾಮಾನುಜಾ ಚಾರ್ಯರು ಸೇರಿದಂತೆ ಇಡೀ ಸಂತ ಪರಂಪರೆ ಶ್ರೀ ರಾಮನನ್ನು ದೇವರೆಂದು ಒಪ್ಪಿಕೊಂಡು ಆರಾಧಿಸುತ್ತಿದೆ, ಲಕ್ಷಾಂತರ ವರ್ಷಗಳಿಂದ ಸಾಧು ಸಂತರು, ಭಕ್ತರು ಆತನನ್ನು ಪೂಜಿಸುತ್ತಿದ್ದಾರೆ, ಇಡೀ ಜಗತ್ತು ಶ್ರೀ ರಾಮನನ್ನು ದೇವನನ್ನಾಗಿ ಕಾಣುತ್ತಿದೆ ಎಂದರು.
ಇಂತಹ ಅಸಾಮಾನ್ಯ ಭಗವಂತನನ್ನು ಕಾಲ್ಪನಿಕ ವ್ಯಕ್ತಿ, ಸಾಮಾನ್ಯ ಮನುಷ್ಯ ಎನ್ನುವುದು ರಾಮ ಮಂದಿರದ ಅವಶ್ಯಕತೆಯಿಲ್ಲ ಎನ್ನುವುದು ಪರಮ ಮೂರ್ಖತನ ಎಂದ ಸ್ವಾಮೀಜಿ ಈ ಹೇಳಿಕೆ ನೀಡಿರುವ ವ್ಯಕ್ತಿಯ ಪೂರ್ವಜರೂ ಸಹ ಶ್ರೀ ರಾಮನನ್ನು ಆರಾಧಿಸಿದ್ದಾರೆ ಈ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ವ್ಯಕ್ತಿ ಅವರ ಹಿರಿಯರನ್ನು ಮೂರ್ಖರೆಂದು ಕರೆದಿದ್ದಾರೆ ಎಂದು ಟೀಕಿಸಿದರು.
ಇತ್ತೀಚೆಗೆ ರಾಮಾಯಣ ಗ್ರಂಥವನ್ನು ತಿರುಚುತ್ತಿರುವುದು, ರಾಮಾಯಣದ ಪಾತ್ರಗಳನ್ನು ಕೆಟ್ಟದಾಗಿ ಬಿಂಬಿಸುತ್ತಿರುವುದರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸ್ವಾಮೀಜಿ ಆಗಿನ ಕಾಲದಲ್ಲಿ ಬಲಾಢ್ಯ ರಾವಣನಿಗೆ ಶ್ರೀ ರಾಮನನ್ನು ಸಂಹರಿಸಲು ಸಾಧ್ಯವಾಗಲಿಲ್ಲ ಆದರೆ ಈಗಿನ ಆಧುನಿಕ ರಾವಣರು ಪೆನ್ನಿನಿಂದ, ಬಾಯಿಯಿಂದ ರಾಮನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂ ಸಮಾಜಕ್ಕೆ ಮುಸ್ಲಿಮರು ಮತ್ತು ಕ್ರೈಸ್ತರು ಶತ್ರುಗಳಲ್ಲ, ಹಿಂದೂ ಧರ್ಮವನ್ನು, ಶ್ರೀ ರಾಮನನ್ನು ಅಲ್ಲಗಳೆಯುವ, ಟೀಕಿಸುವ, ವಿರೋಧಿಸುವ ಹಿಂದೂಗಳೇ ನಿಜವಾದ ಶತ್ರುಗಳು ಎಂದು ಹೇಳಿದರು.
ಶ್ರೀ ರಾಮನವಮಿ ಉತ್ಸವದ ಪ್ರಯುಕ್ತ ವಿಶೇಷ ಪೂಜೆ ನಡೆಯಿತು, ಭಕ್ತರಿಂದ ನಾಮ ಸಂಕೀರ್ತನೆ, ಭಜನೆ, ಸಾರ್ವಜನಿಕ ಅನ್ನಸಂತರ್ಪಣೆ ಜರುಗಿತು.
ಸಮಾರಂಭಕ್ಕೆ ಮುನ್ನ ನಗರದ ಮುಖ್ಯ ಬೀದಿಗಳಲ್ಲಿ ನಾಮ ಸಂಕೀರ್ತನಾ ಮೆರವಣಿಗೆ ನಡೆಯಿತು.