ನವೆದಹಲಿ : 2012ರ ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳಿಗೆ ದೆಹಲಿಯ ಕೋರ್ಟ್ ಹೊಸ ಡೆತ್ವಾರೆಂಟ್ ಜಾರಿ ಮಾಡಿದ್ದು, ಮಾರ್ಚ್ 20ರಂದು ಬೆಳಿಗ್ಗೆ 5:30ಕ್ಕೆ ಅತ್ಯಾಚಾರಿಗಳನ್ನು ಗಲ್ಲಿಗೇರಿಸುವಂತೆ ಆದೇಶ ಹೊರಡಿಸಿದೆ. ನಾಲ್ವರು ಆರೋಪಿಗಳಲ್ಲಿ ಒಬ್ಬನಾದ ಪವನ್ ಗುಪ್ತಾ ಅವರು ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿಗಳು ತಿರಸ್ಕರಿಸುತ್ತಿದ್ದಂತೆ ದೆಹಲಿ ಸರ್ಕಾರ ಹಾಗೂ ತಿಹಾರ್ ಜೈಲು ಆಡಳಿತ ಆರೋಪಿಗಳಿಗೆ ಹೊಸ ಡೆತ್ ವಾರೆಂಟ್ ಜಾರಿ ಮಾಡುವಂತೆ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ಗೆ ಮನವಿಯನ್ನು ಸಲ್ಲಿಸಿತ್ತು. ಇಂದು ಮಧ್ಯಾಹ್ನ ಈ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯ ಮಾರ್ಚ್ 20ರಂದು ಬೆಳಿಗ್ಗೆ 5:30ಕ್ಕೆ ಅತ್ಯಾಚಾರಿಗಳನ್ನು ಗಲ್ಲಿಗೇರಿಸುವಂತೆ ಹೊಸ ಡೆತ್ ವಾರೆಂಟ್ ಜಾರಿ ಮಾಡಿ ಆದೇಶ ಹೊರಡಿಸಿದೆ.










