ಚಿಕ್ಕಮಗಳೂರು : ಪೋಷಕರು ಒಣ ಪ್ರತಿಷ್ಠೆಯನ್ನು ಬಿಟ್ಟು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಜಗದೀಶಾಚಾರ್ ಸಲಹೆ ಮಾಡಿದರು.
ತಾಲ್ಲೂಕಿನ ಕೆಳಗೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ ಸೇವಾದಳದ ಸುಭಾಶ್‍ಚಂದ್ರಬೋಸ್ ಘಟಕ ಮಂಗಳವಾರ ಏರ್ಪಡಿಸಿದ್ದ ಶಾರದಾ ಪೂಜೆಯಲ್ಲಿ ಪಾಲ್ಗೊಂಡು ನಂತರ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೆಲವು ವರ್ಷಗಳ ಹಿಂದೆ ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳಿಂದ ತುಂಬಿರುತ್ತಿದ್ದವು ಆದರೆ ಪೋಷಕರ ಇಂಗ್ಲೀಷ್ ವ್ಯಾಮೋಹ ಮತ್ತು ಒಣ ಪ್ರತಿಷ್ಠೆಯಿಂದಾಗಿ ಇಂದು ಆ ಶಾಲೆಗಳು ಮಕ್ಕಳ ಕೊರತೆಯನ್ನು ಎದುರಿಸುತ್ತಿವೆ ಇದರಿಂದಾಗಿ ಈಗಾಗಲೇ ಬಹಳಷ್ಟು ಶಾಲೆಗಳನ್ನು ಮುಚ್ಚಲಾಗಿದೆ ಎಂದು ವಿಷಾದಿಸಿದರು.
ಖಾಸಗಿ ಶಾಲೆಗಳಲ್ಲಿ ಇದ್ದಂತೆ ಸರ್ಕಾರಿ ಶಾಲೆಗಳಲ್ಲೂ ನುರಿತ ಶಿಕ್ಷಕರು ಇರುತ್ತಾರೆ, ಇಂದು ದೊಡ್ಡ ಹುದ್ದೆಗಳಲ್ಲಿ ಇರುವವರು ಸರ್ಕಾರಿ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳೇ ಎಂದ ಅವರು ಪೋಷಕರು ಇದನ್ನು ಅರಿಯಬೇಕು ಸಾಲಸೋಲ ಮಾಡಿ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುವ ಬದಲು ಬಹುತೇಕ ಉಚಿತ ಶಿಕ್ಷಣ ದೊರೆಯುವ ಸರ್ಕಾರಿ ಶಾಲೆಗಳಿಗೇ ದಾಖಲಿಸಬೇಕು ಹಾಗಾದಾಗ ಮಾತ್ರ ಆ ಶಾಲೆಗಳು ಉಳಿಯುತ್ತವೆ ಎಂದರು.
ಭಾರತ ಸೇವಾದಳದ ಜಿಲ್ಲಾ ಕಾರ್ಯದರ್ಶಿ ಎಂ.ಹಂಪಯ್ಯ ಮಾತನಾಡಿ ಸರ್ಕಾರಿ ಶಾಲೆಗಳನ್ನು ಉಳಿಸುವ ಹೊಣೆಗಾರಿಕೆ ಗ್ರಾಮೀಣ ಪೋಷಕರ ಮೇಲಿದೆ ಎಂದು ಹೇಳಿದರು.
ಭಾರತ ಸೇವಾದಳದ ಸುಭಾಶ್ ಚಂದ್ರಬೋಸ್ ಘಟಕದಿಂದ ನಡೆಸಲಾದ ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಮುಖ್ಯ ಶಿಕ್ಷಕಿ ಲತಾ ಪಿಂಟೋ ಅಧ್ಯಕ್ಷತೆ ವಹಿಸಿದ್ದರು, ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಪದ್ಮರಾಜ್, ಸೇವಾದಳದ ಶಿಕ್ಷಕಿ ಸುಮಾರಾಣಿ, ಸದಸ್ಯ ಶಾಂತಕುಮಾರ್, ಶಿಕ್ಷಕರಾದ ಚಂದ್ರಶೇಖರಪ್ಪ, ನಾಗಶ್ರೀ ಉಪಸ್ಥಿತರಿದ್ದರು.
Home ಸ್ಥಳಿಯ ಸುದ್ದಿ ಪೋಷಕರು ಒಣ ಪ್ರತಿಷ್ಠೆಯನ್ನು ಬಿಟ್ಟು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಬೇಕು : ಜಗದೀಶಾಚಾರ್…










