ಚಿಕ್ಕಮಗಳೂರು: ವೀರಶೈವ ಧರ್ಮದ ಪ್ರಮುಖ ಗ್ರಂಥವಾದ ಸಿದ್ದಾಂತ ಶಿಖಾಮಣಿ ಗ್ರಂಥವನ್ನು ಒಂದು ವರ್ಷದೊಳಗೆ ಎಲ್ಲಾ ವಿದೇಶಿ ಭಾಷೆಗಳಿಗೂ ಅನುವಾದ ಮಾಡಲಾಗುವುದು ಎಂದು ಕಾಶಿ ಜಂಗಮವಾಡಿ ಮಠಾಧೀಶ ಜಗದ್ಗುರು ಡಾ|| ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದ ಸ್ವಾಮೀಜಿ ಹೇಳಿದರು.
ಜಗದ್ಗುರು ಪಂಚಾಚಾರ್ಯ ಸೇವಾ ಸಮಿತಿ ಜಗದ್ಗುರು ರೇಣುಕಾಚಾರ್ಯ ಟ್ರಸ್ಟ್‍ನ ಸಹಯೋಗದೊಂದಿಗೆ ನಗರದ ರೇಣುಕಾಚಾರ್ಯ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಏರ್ಪಡಿಸಿದ್ದ ಧರ್ಮಸಮ್ಮೇಳನದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಸಿದ್ದಾಂತ ಶಿಖಾಮಣಿ ಗ್ರಂಥವನ್ನು ಈಗಾಗಲೇ ಕನ್ನಡ, ತೆಲುಗು, ಮರಾಠಿ, ಮಲಯಾಳಂ, ಇಂಗ್ಲೀಷ್ ಸೇರಿದಂತೆ 18 ಭಾಷೆಗಳಿಗೆ ಅನುವಾದಿಸಲಾಗಿದ್ದು, ಇನ್ನು ಒಂದು ವರ್ಷದೊಳಗೆ ಎಲ್ಲಾ ವಿದೇಶಿ ಭಾಷೆಗಳಿಗೂ ಅನುವಾದಿಸುವುದರ ಜೊತೆಗೆ ಸಿದ್ದಾಂತ ಶಿಖಾಮಣಿಯ ಆಪ್ ಮತ್ತು ಅದರ ಪಾರಾಯಣದ ಧ್ವನಿ ಮುದ್ರಿಕೆಯನ್ನೂ ಹೊರತಂದು ವೆಬ್‍ಸೈಟ್‍ನಲ್ಲಿ ಹಾಕಲಾಗುವುದು, ಪ್ರಧಾನ ಮಂತ್ರಿಗಳ ಕೈಯಲ್ಲಿ ಅದನ್ನು ಬಿಡುಗಡೆ ಮಾಡಿಸಲಾಗುವುದು ಎಂದರು.
ಇದರಿಂದಾಗಿ ಭಕ್ತರು ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಉಚಿತವಾಗಿ ತಮ್ಮ ಮೊಬೈಲ್‍ನಲ್ಲೇ ಸಿದ್ದಾಂತ ಶಿಖಾಮಣಿಯನ್ನು ಓದಬಹುದು ಅಥವಾ ಕೇಳಬಹುದು ಎಂದು ತಿಳಿಸಿದರು.
ಕಾಶಿ ಪೀಠದ ಶ್ರೀ ಜಗದ್ಗುರು ವಿಶ್ವಾರಾಧ್ಯ ಗುರುಕುಲ ಅನಾದಿ ಕಾಲದಿಂದ ಜ್ಞಾನ ಪ್ರಸಾರವನ್ನು ಮಾಡುತ್ತಿದೆ, 1913 ರಲ್ಲಿ ಅದಕ್ಕೆ ವಿಶ್ವಾರಾಧ್ಯ ಗುರುಕುಲವೆಂದು ನಾಮಕರಣ ಮಾಡಲಾಯಿತು ಹಾಗಾಗಿ ಕಾಶಿಯಲ್ಲಿ ಶಿವರಾತ್ರಿ ಹಬ್ಬದ ವೇಳೆಗೆ ಎಲ್ಲಾ ಧರ್ಮಗಳ ಮಠಾಧೀಶರನ್ನೂ ಆಹ್ವಾನಿಸಿ ಶತಮಾನೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದರು.
ನಾವು ಮನುಷ್ಯರಾಗಿದ್ದರೂ ಆಹಾರ, ವಿಹಾರಗಳಲ್ಲಿ ಇಂದು ಪ್ರಾಣಿಗಳಂತೆ ವರ್ತಿಸುತ್ತಿದ್ದೇವೆ. ಹಿಂದೆ ಊಟ ಮಾಡುವವರು ಕುಳಿತಿರುತ್ತಿದ್ದರು, ಊಟ ಬಡಿಸುವವರು ಓಡಾಡುತ್ತಿದ್ದರು, ಇಂದು ಅದು ಅದಲು ಬದಲಾಗಿದ್ದು, ಬಡಿಸುವವರು ಕುಳಿತಿರುತ್ತಾರೆ, ಊಟ ಮಾಡುವವರು ಓಡಾಡುತ್ತಾ ಊಟ ಮಾಡುತ್ತಾರೆ ಎಂದ ಅವರು ಓಡಾಡುತ್ತಾ ಆಹಾರ ಸೇವಿಸುವುದು ಪ್ರಾಣಿಗಳು ಮಾತ್ರ ಎಂದು ಹೇಳಿದರು.
ಅನ್ನದಾನ ಶ್ರೇಷ್ಠವಾದ ದಾನ, ಮನುಷ್ಯನಿಗೆ ಮೊದಲು ಬೇಕಾಗಿರುವುದು ಅನ್ನವೇ ಎಲ್ಲಾ ಜೀವಿಗಳೂ ಅನ್ನಕ್ಕಾಗಿಯೇ ಬದುಕುತ್ತವೆ ಹಾಗಾಗಿ ಹಸಿದವರಿಗೆ ಅನ್ನ ನೀಡುವುದು ಶ್ರೇಷ್ಠ ಆದರೆ ಅನ್ನದಾನಕ್ಕಿಂತಲೂ ವಿದ್ಯಾದಾನ ಅತ್ಯಂತ ಶ್ರೇಷ್ಠವಾದುದ್ದು, ಅನ್ನದಿಂದ ಕ್ಷಣಿಕ ತೃಪ್ತಿ ದೊರೆಯುತ್ತದೆ ಆದರೆ ಮನುಷ್ಯ ಗಳಿಸಿದ ಜ್ಞಾನ ಸಂಪಾದನೆ ಆತನ ಇಡೀ ಜೀವನದುದ್ದಕ್ಕೂ ಬರುತ್ತದೆ ಎಂದು ತಿಳಿಸಿದರು.
ನುಡಿ ನಮನ ಸಲ್ಲಿಸಿದ ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ವೀರಶೈವ ಧರ್ಮದ ಬಗ್ಗೆ ಅತ್ಯಂತ ನಿಖರವಾಗಿ ಹೇಳ ಬಲ್ಲವರಲ್ಲಿ ಕಾಶಿ ಮಠಾಧೀಶರು ಪ್ರಮುಖರು ಎಂದರು.
ಯಡಿಯೂರು ಮಠಾಧೀಶ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಇಂದಿನ ಮಠಾಧೀಶರುಗಳು ಶಾಲೆ ಕಾಲೇಜು ಮತ್ತು ವಿದ್ಯಾಸಂಸ್ಥೆಗಳನ್ನು ನಡೆಸುತ್ತಿರುವುದಕ್ಕೆ ಮೂಲ ಪ್ರೇರಣೆ ಕಾಶಿಯ ಜಂಗಮವಾಡಿ ಮಠ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಗದ್ಗುರು ಪಂಚಾಚಾರ್ಯ ಸೇವಾ ಸಮಿತಿಯ ಗೌರವಾಧ್ಯಕ್ಷ ಸಿ.ವಿ.ಜಯದೇವ್ ಕಳೆದ ಮೂರು ವರ್ಷಗಳಿಂದ ಸಮಿತಿ ವತಿಯಿಂದ ನಗರದಲ್ಲಿ ಉಜ್ಜೈನಿ, ಕೇದಾರ ಮತ್ತು ಶ್ರೀಶೈಲ ಜಗದ್ಗುರುಗಳಿಂದ ಧಾರ್ಮಿಕ ಪ್ರವಚನವನ್ನು ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಪಂಚ ಪೀಠಗಳ ಎಲ್ಲಾ ಜಗದ್ಗುರುಗಳನ್ನೂ ಕರೆಸಿ ಒಂದೇ ವೇದಿಕೆಯಲ್ಲಿ ಪ್ರವಚನ ಏರ್ಪಡಿಸಲಾಗುವುದು ಎಂದು ಹೇಳಿದರು.
ಜಗದ್ಗುರು ರೇಣುಕಾಚಾರ್ಯ ಟ್ರಸ್ಟ್‍ನ ಉಪಾಧ್ಯಕ್ಷೆ ಗೌರಮ್ಮ ಬಸವೇಗೌಡ, ಧರ್ಮ ಸಮ್ಮೇಳನ ಮತ್ತು ಜಗದ್ಗುರು ವಿಶ್ವಾರಾಧ್ಯ ಗುರುಕುಲದ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿದರು.
ಪಂಚಾಚಾರ್ಯ ಸೇವಾ ಸಮಿತಿಯ ಪದಾಧಿಕಾರಿಗಳು,ದಾನಿಗಳು ಮತ್ತು ಗಣ್ಯರಿಗೆ ಕಾಶಿ ಮಠಾಧೀಶರು ಗುರುರಕ್ಷೆ ನೀಡಿದರು.
ಪಂಚಾಚಾರ್ಯ ಸೇವಾಸಮಿತಿಯ ಅಧ್ಯಕ್ಷ ಕಟ್ಟಿಗೇಹಳ್ಳಿ ಮಠದ ಮಂಜುನಾಥಯ್ಯ ಅಧ್ಯಕ್ಷತೆ ವಹಿಸಿದ್ದರು, ನಂದಿಪುರ ಹಿರೇಮಠದ ಶ್ರೀ ನಂದೀಶ್ವರ ಶಿವಾಚಾರ್ಯ ಸ್ವಾಮೀಜಿ, ತೆಂಡೇಕೆರೆ ಮಠದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ಹುಣಸಘಟ್ಟದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಬೇರುಗಂಡಿ ಮಠದ ಶ್ರೀ ರೇಣುಕಾ ಮಹಾಂತ ಶಿವಾಚಾರ್ಯ ಸ್ವಾಮೀಜಿ ವೀರಶೈವ ಮಹಾಸಭಾದ ಅಧ್ಯಕ್ಷ ಹೆಚ್.ಎಂ.ಲೋಕೇಶ್, ಮಾಜಿ ಅಧ್ಯಕ್ಷ ಸಿ.ಬಿ.ಮಲ್ಲೇಗೌಡ, ರೇಣುಕಾಚಾರ್ಯ ಟ್ರಸ್ಟ್‍ನ ಖಜಾಂಚಿ ಯು.ಎಂ.ಬಸವರಾಜು, ಜಿ.ಎಂ.ರಾಜಶೇಖರ್ , ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಬಿ.ಪರಮೇಶ್ವರಪ್ಪ ಉಪಸ್ಥಿತರಿದ್ದರು.
ಚಂದನ ಕಾರ್ಯಕ್ರಮವನ್ನು ನಿರೂಪಿಸಿದರು, ಪಂಚಾಚಾರ್ಯ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಿ.ಬಿ.ನಂದೀಶ್ ಸ್ವಾಗತಿಸಿದರು, ಸಹಕಾರ್ಯದರ್ಶಿ ಐ.ಎಂ.ಬಸವರಾಜ್ ವಂದಿಸಿದರು.











