ಧಾರವಾಹಿಗಳಲ್ಲಿ ಮುಖ್ಯ ಪಾತ್ರ ಸಿಗುತ್ತಿಲ್ಲ ಎಂದು ಮನನೊಂದು ನಟಿ ಆತ್ಮಹತ್ಯೆಗೆ ಶರಣು…

611
firstsuddi

ಕೋಲ್ಕತ್ತಾ : ಧಾರವಾಹಿಯಲ್ಲಿ ಪ್ರಮುಖ ಪಾತ್ರ ಸಿಗಲಿಲ್ಲವೆಂದು ಬಂಗಾಳಿ ನಟಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಶ್ಚಿಮ ಬಂಗಾಳದ ಬುರ್ದ್ವಾನ್ ನಲ್ಲಿ ನಡೆದಿದೆ. ಸುಬರ್ನಾ ಜಾಶ್(24) ಆತ್ಮಹತ್ಯೆ ಮಾಡಿಕೊಂಡ ನಟಿ ಎಂದು ಗುರುತಿಸಲಾಗಿದೆ. ಮೂಲತಃ ಬುರ್ದ್ವಾನ್ ಮೂಲದ ಸುಬರ್ನಾ ಅವರು ತಮ್ಮ ಮನೆಯ ಫ್ಯಾನ್‍ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇದನ್ನು ಗಮನಸಿದ ಪೋಷಕರು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಅಷ್ಟರೊಳಗೆ ಸುಬರ್ನಾ ಅವರು ಮೃತಪಟ್ಟಿದ್ದರು. ನಟಿಯಾಗಬೇಕೆಂಬ ಕನಸು ಕಂಡಿದ್ದ ಸುಬರ್ನಾ ಅವರು ಅನೇಕ ಆಡಿಷನ್‍ನಲ್ಲಿ ಭಾಗವಹಿಸಿದ್ದರು. ಬಳಿಕ ಕೆಲವು ಧಾರವಾಹಿಗಳಲ್ಲಿ ಪೋಷಕ ಪಾತ್ರ ಅಭಿನಯಿಸುವ ಅವಕಾಶವನ್ನು ಪಡೆದುಕೊಂಡಿದ್ದರು. ಆದರೆ ಅವರಿಗೆ ಮುಖ್ಯ ಪಾತ್ರಗಳು ಯಾವುದು ಸಿಗದೆ ಇದ್ದ ಕಾರಣ ಸುಬರ್ನಾ ಅವರು ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದ್ದು, ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಆದರೆ ನಟಿಯ ಆತ್ಮಹತ್ಯೆಗೆ ನಿಖರ ಕಾರಣ ಏನೆಂದು ಇನ್ನು ತಿಳಿದು ಬಂದಿಲ್ಲ. ಈ ಕುರಿತು ಸ್ಥಳಿಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.