ಕಳಸ :ಸ್ಪೋಟಕ ಸಾಮಗ್ರಿಗಳನ್ನು ಹೊಂದಿದ್ದ ಆರೋಪಿ ಬಂಧನ…

230

ಕಳಸ : ಮನೆಯ ಟೆರೆಸ್ ಮೇಲೆ ಸ್ಪೋಟಕ ಸಾಮಗ್ರಿಗಳನ್ನು ಹೊಂದಿದ್ದ ಆರೋಪದಡಿ ಶಂಕಿತ ಆರೋಪಿಯೊಬ್ಬರನ್ನು ಕಳಸ ಪೊಲೀಸರು ಬಂಧಿಸಿರುವ ಘಟನೆ ಜಿಲ್ಲೆಯ ಕಳಸ ಪಟ್ಟಣದಲ್ಲಿ ಮಂಗಳವಾರ ನಡೆದಿದೆ.ಬಂಧಿತ ಶಂಕಿತ ಆರೋಪಿಯು ಕಳಸ ಪಟ್ಟಣದಲ್ಲಿ ಕಳೆದ ಎರಡು ದಶಕಗಳಿಂದ ಅಡಿಕೆ, ಕಾಫಿ, ಕಾಳುಮೆಣಸು ವ್ಯಾಪಾರ ಮಾಡುತ್ತಿದ್ದರೆಂದು ತಿಳಿದು ಬಂದಿದೆ. ಮಂಗಳವಾರ ಬೆಳಿಗ್ಗೆ ವೇಳೆ ಖಚಿತ ಮಾಹಿತಿ ಮೇರೆಗೆ ಕಳಸ ಪೊಲೀಸ್ ಠಾಣೆಯ ಪೊಲೀಸರು ಪಟ್ಟಣದಲ್ಲಿರುವ ಆರೋಪಿಯ ಮನೆ ಮೇಲೆ ದಾಳಿ ನಡೆಸಿ ಶೋಧ ನಡೆಸಿದ್ದಾರೆ. ಈ ವೇಳೆ ಮನೆಯ ಟೆರೆಸ್ ಮೇಲೆ ಜಿಲೆಟಿನ್ ಕಡ್ಡಿಗಳು, ಡಿಟೋನೇಟರ್‍ಗಳು ಪತ್ತೆಯಾಗಿದ್ದು, ಪೊಲೀಸರು ಅವುಗಳನ್ನು ವಶಕ್ಕೆ ಪಡೆದು ಮನೆಗೆ ಸಿಸಿ ಟಿವಿಗಳ ಪುಟೇಜ್ ವಶಪಡಿಸಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಚಿಕ್ಕಮಗಳೂರು ಎಸ್ಪಿ ಹರೀಶ್ ಪಾಂಡೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಪ್ರಕರಣ ವಿಚಾರಣೆಯಲ್ಲಿದೆ.

ಬೆಚ್ಚಿಬಿದ್ದ ಕಳಸ ಪಟ್ಟಣ ನಿವಾಸಿಗಳು:
ಮಂಗಳವಾರ ಕಳಸ ಪಟ್ಟಣದ ಮನೆಯೊಂದರಲ್ಲಿ ಸ್ಪೋಟಕ ವಸ್ತುಗಳು ಪತ್ತೆಯಾದ ಸುದ್ದಿ ತಿಳಿಯುತ್ತಿದ್ದಂತೆ ಇಡೀ ಕಳಸ ಹೋಬಳಿಯ ಜನತೆ ಬೆಚ್ಚಿಬಿದ್ದಾರೆ. ಕಳಸ ಹೋಬಳಿ ನಕ್ಸಲ್ ಪೀಡತ ಗ್ರಾಮಗಳನ್ನು ಹೊಂದಿರುವ ಪ್ರದೇಶವಾಗಿದೆ. ಹೋಬಳಿ ವ್ಯಾಪ್ತಿಯಲ್ಲಿ ಈ ಹಿಂದೆ ಒಂದೆರೆಡು ಎನ್‍ಕೌಂಟರ್‍ಗಳಲ್ಲಿ ಕೆಲವು ಕೆಲ ನಕ್ಸಲರನ್ನು ಹತ್ಯೆ ಮಾಡಲಾಗಿದೆ. ನಕ್ಸಲರೊಂದಿಗೆ ಪೊಲೀಸರ ಗುಂಡಿನ ಚಕಮಕಿ ನಡೆದಿರುವ ಘಟನೆ ಹೊರತು ಪಡಿಸಿ ಮನೆಯೊಂದರಲ್ಲಿ ಸ್ಪೋಟಕಗಳನ್ನು ಅಡಗಿಸಿಟ್ಟ ಘಟನೆ ಇದೇ ಪ್ರಥಮ ಬಾರಿಗೆ ಬೆಳಕಿಗೆ ಬಂದಿದೆ. ಕಳಸ ಪಟ್ಟಣ ಹಿಂದು ಮುಸ್ಲಿಮರ ನಡುವಿನ ಸಾಮರಸ್ಯ ಸೌಹಾರ್ದಕ್ಕೆ ಹೆಸರಾಗಿದ್ದು, ಈ ಹಿಂದೆ ಸಾಮರಸ್ಯ ಕದಡುವಂತಹ ಅಥವಾ ಭಯೋತ್ಪಾದಕ ಚಟುವಟಿಕೆಗಳಂತಹ ಒಂದೇ ಒಂದು ಪ್ರಕರಣದ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದಾಖಲಾಗದಿರುವುದು ಇದಕ್ಕೆ ಸಾಕ್ಷಿಯಾಗಿದೆ. ಈ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಸ್ಪೋಟಕಗಳು ಮನೆಯೊಂದರಲ್ಲಿ ಪೊಲೀಸರಿಗೆ ಸಿಕ್ಕಿದ ಸುದ್ದಿಯಿಂದಾಗಿ ಕಳಸ ಹೋಬಳಿಯ ಜನತೆ ಆಶ್ಚರ್ಯಕ್ಕೊಳಗಾಗಿದ್ದು, ಸುದ್ದಿಯಿಂದ ಬೆಚ್ಚಿಬಿದ್ದಿದ್ದಾರೆಂದು ತಿಳಿದು ಬಂದಿದೆ. ಎಲ್ಲೋ ಕೇಳುತ್ತಿದ್ದ ಇಂತಹ ವಿಚಾರಗಳು ಇಂದು ನಮ್ಮ ಮನೆ ಮುಂದೆ ನಡೆಯುತ್ತಿರುವ ಬಗ್ಗೆ ಜನ ಭಯಭೀತರಾಗಿದ್ದಾರೆ. ಈ ಬಗ್ಗೆ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿ ತಪ್ಪಿತಸ್ಥರು ಯಾರ್ಯಾರು ಇದ್ದಾರೆ ಅವರನ್ನು ಕೂಡಲೇ ಬಂದಿಸಬೇಕು ಎಂದು ಸ್ಥಳಿಯರು ಆಗ್ರಹಿಸಿದ್ದಾರೆ.