ಚಿಕ್ಕಮಗಳೂರು : ಸರ್ಕಾರ ಮತ್ತು ಸಂಘ ಸಂಸ್ಥೆಗಳಿಂದ ದೊರೆಯುವ ಸವಲತ್ತುಗಳನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಂಡು ವಿದ್ಯಾವಂತರಾಗಿ ಹೊರಹೊಮ್ಮಬೇಕು ಎಂದು ವಾಸವಿ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎ.ವಾಸುದೇವಮೂರ್ತಿ ಸಲಹೆ ಮಾಡಿದರು.
ನಗರ ಹೊರವಲಯದ ಹಿರೇಮಗಳೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾನಿಗಳ ನೆರವಿನಿಂದ ನವೀಕರಿಸಲಾದ 2.5 ಲಕ್ಷ ರೂ ವೆಚ್ಚದ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಬಹಳಷ್ಟು ವರ್ಷಗಳ ಹಿಂದೆ ಬಡವರಿಗೆ ಶಿಕ್ಷಣ ಮರೀಚಿಕೆಯಾಗಿತ್ತು, ಗ್ರಾಮೀಣ ಮಕ್ಕಳು ಮೈಲಿಗಟ್ಟಲೆ ನಡೆದು ಅವರಿವರ ಮನೆಯಲ್ಲಿ ವಾರಾನ್ನದೂಟ ಮಾಡಿ ವಿದ್ಯಾರ್ಜನೆ ಮಾಡಬೇಕಾಗಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ಬದಲಾಗಿದೆ ಸರ್ಕಾರಗಳು ಕೋಟ್ಯಾಂತರ ರೂ ವ್ಯಯಿಸಿ ಅನೇಕ ಸೌಲಭ್ಯಗಳ ಜೊತೆಗೆ ಉಚಿತ ಶಿಕ್ಷಣವನ್ನು ನೀಡುತ್ತಿವೆ ಎಂದರು.
ದಾನಿಗಳು ಮತ್ತು ಸಂಘ ಸಂಸ್ಥೆಗಳೂ ಸಹ ಶಿಕ್ಷಣಕ್ಕಾಗಿ ಅನೇಕ ಸವಲತ್ತುಗಳನ್ನು ನೀಡುತ್ತಿವೆ ಎಂದ ಅವರು ಅದನ್ನು ಸದ್ಭಳಕೆ ಮಾಡಿಕೊಂಡು ವಿದ್ಯಾರ್ಥಿಗಳು ಶ್ರದ್ದೆಯಿಂದ ವಿದ್ಯಾರ್ಜನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ ಮಾತನಾಡಿ ವಿದ್ಯೆ ಯಾರೂ ಕದಿಯಲಾಗದ ಸಂಪತ್ತು, ವಿದ್ಯಾವಂತನನ್ನು ಸಮಾಜ ಗೌರವಿಸುತ್ತದೆ ಶಿಕ್ಷಣವಂತರಾದರೆ ಮಾತ್ರ ಸ್ವಾವಲಂಬಿಗಳಾಗಿ ಬದುಕಲು ಸಾಧ್ಯವಾಗುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯಶಿಕ್ಷಕ ಎ.ಇ.ಅಶೋಕ್ ಶಾಲೆಯ ನವೀಕರಣಕ್ಕೆ ದೇಣಿಗೆ ನೀಡಿ ಸಹಕರಿಸಿದ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಶಾಲೆಯ ನವೀಕರಣಕ್ಕೆ ದೇಣಿಗೆ ನೀಡಿದ ದಾನಿಗಳನ್ನು ಮತ್ತು ಸಹಕರಿಸಿದವರನ್ನು ಸಮಾರಂಭದಲ್ಲಿ ಗೌರವಿಸಲಾಯಿತು, ವರ್ಗಾವಣೆಯಾಗಿ ಬಂದ ಕೇವಲ 4 ತಿಂಗಳಲ್ಲಿ ಶಾಲೆಯನ್ನು ಅಭಿವೃದ್ದಿ ಪಡಿಸಿದ ಮುಖ್ಯ ಶಿಕ್ಷಕ ಎ.ಇ.ಅಶೋಕ್ ಅವರನ್ನು ಶಾಲಾಭವೃದ್ದಿ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಶಾಲಾಭಿವೃದ್ದಿ ಸಮಿತಿಯ ಸದಸ್ಯ ಶ್ರೀದೇವಿ ಮೋಹನ್, ಡಯಟ್ ಪ್ರಾಂಶುಪಾಲ ಪ್ರಕಾಶ್, ಕ್ಷೇತ್ರ ಸಮನ್ವಯಾಧಿಕಾರಿ ಜಯರಾಂ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಉದಯಕುಮಾರ್, ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ರೇವಣ್ಣಗೌಡ ಪ್ರಾಥಮಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಂದರೇಶ್ ಉಪಸ್ಥಿತರಿದ್ದರು.
Home ಸ್ಥಳಿಯ ಸುದ್ದಿ ಸವಲತ್ತುಗಳನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಂಡು ವಿದ್ಯಾವಂತರಾಗಿ ಹೊರಹೊಮ್ಮಬೇಕು:ಎಸ್.ಎ.ವಾಸುದೇವಮೂರ್ತಿ










