ಚಿಕ್ಕಮಗಳೂರು: ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾ ಮತ್ತು ತಾಲ್ಲೂಕು ಘಟಕದ ವತಿಯಿಂದ ನಗರದ ಜಿಲ್ಲಾ ಕಾರಾಗೃಹದಲ್ಲಿ ಶುಕ್ರವಾರ ನಡೆದ ಸುಗ್ಗಿ ಹಬ್ಬದಲ್ಲಿ ಜಾನಪದ ಸಂಭ್ರಮ ಕಾರ್ಯಕ್ರಮ ಖೈದಿಗಳನ್ನು ರಂಜಿಸಿತು.
ಗಾಯಕರಾದ ಬಕ್ಕಿ ಮಂಜುನಾಥ್ ಮತ್ತು ನವೀನ್ ತಮ್ಮ ಕಂಚಿನ ಕಂಠದಲ್ಲಿ ಗೀಗೀ ಪದ, ಚೌಡಿಕೆ ಪದ, ತತ್ವಪದ ಸೇರಿದಂತೆ ಜಾನಪದದ ವಿವಿಧ ಪ್ರಾಕಾರಗಳನ್ನು ಹಾಡುವ ಮೂಲಕ ಕಾರಾಗೃಹ ನಿವಾಸಿಗಳ ಮನಗೆದ್ದರು.
ಜಾನಪದದ ಒಗಟುಗಳನ್ನು ಹಾಡಿ ಅವುಗಳನ್ನು ಕೈದಿಗಳಿಂದ ಬಿಡಿಸುವ ಮೂಲಕ ರಂಜಿಸಿದರು, ನವಿರು ಹಾಸ್ಯದೊಂದಿಗೆ ಕಾರಾಗೃಹದಲ್ಲಿ ನಗೆಯ ಬುಗ್ಗೆಯನ್ನು ಎಬ್ಬಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ಸೂರಿ ಶ್ರೀನಿವಾಸ್ ಖೈದಿಗಳಿಗೆ ಜಾನಪದ ಗೀತೆಗಳನ್ನು ಕಲಿಸುವ ನಿಟ್ಟಿನಲ್ಲಿ ಸದ್ಯದಲ್ಲೇ ಕಾರಾಗೃಹದಲ್ಲಿ ಪರಿಷತ್ತಿನಿಂದ ತರಬೇತಿ ಕಾರ್ಯಾಗಾರ ನಡೆಸಲಾಗುವುದು ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕಿನ ನಿರ್ದೇಶಕ ಎಂ.ಸಿ.ಶಿವಾನಂದ ಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಬಂದಿಖಾನೆಯ ಸಹಾಯಕ ಅಧೀಕ್ಷಕ ರಾಕೇಶ್ ಕಾಂಬ್ಳೆ ಅಧ್ಯಕ್ಷತೆ ವಹಿಸಿದ್ದರು.
ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಬಿ.ಆರ್.ಜಗಧೀಶ್, ಉದ್ಯಮಿ ರವಿಸಿಂಗ್, ವರದರಾಜು, ಕಾರಾಗೃಹದ ವೀಕ್ಷಕ ಉಮೇಶ್ ಚಂದ್ ನಾಯಕ್ ಉಪಸ್ಥಿತರಿದ್ದರು.











