ಕೋಲಾರ : ಜಮ್ಮು ಕಾಶ್ಮೀರದಲ್ಲಿ ಉಗ್ರರ ಗುಂಡಿನ ದಾಳಿಗೆ ಹುತಾತ್ಮರಾದ ಕೋಲಾರದ ವೀರಯೋಧ ಪ್ರಶಾಂತ್ ಅವರ ಅಂತ್ಯಸ್ಕಾರವನ್ನು ತಮ್ಮ ಸ್ವಗ್ರಾಮವಾದ ಬಂಗಾರಪೇಟೆಯ ಕಣಿಂಬೆಲೆ ಗ್ರಾಮದಲ್ಲಿ ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. 25 ವರ್ಷದ ಯೋಧ ಪ್ರಶಾಂತ್ ಅವರು ಫೆ. 26ರಂದು ಜಮ್ಮು ಕಾಶ್ಮೀರಾದ ರಜೌರಿ ಪ್ರದೇಶದಲ್ಲಿ ನಡೆದ ಉಗ್ರರು ಹಾಗೂ ಯೋಧರ ನಡುವಿನ ಗುಂಡಿನ ದಾಳಿಯಲ್ಲಿ ಉಗ್ರರ ಗುಂಡಿಗೆ ತುತ್ತಾಗಿ ಹುತಾತ್ಮರಾಗಿದ್ದರು. ಯೋಧರ ಪಾರ್ಥೀವ ಶರೀರ ನಿನ್ನೆ ರಾತ್ರಿ ಸ್ವಗ್ರಾಮಕ್ಕೆ ಬಂದಿದ್ದು, ಬಂಗಾರಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿತ್ತು. ಬಳಿಕ ಇಂದು ಬೆಳಿಗ್ಗೆ 7ಗಂಟೆಗೆ ಯೋಧ ಪ್ರಶಾಂತ್ ಅವರ ಪಾರ್ಥೀವ ಶರೀರವನ್ನು ಬಂಗಾರಪೇಟೆಯಿಂದ ಮೆರವಣಿಗೆ ಮೂಲಕ ತಂದು ಬಾಲಕರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬಳಿಕ 10 ಗಂಟೆಗೆ ಯೋಧರ ಪಾರ್ಥೀವ ಶರೀರವನ್ನು ತೆರೆದ ವಾಹನದಲ್ಲಿ ಇರಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಯೋಧರ ಸ್ವಗ್ರಾಮವಾದ ಕಣಿಂಬೆಲೆ ಗ್ರಾಮಕ್ಕೆ ತಂದು ಇಂದು ಮಧ್ಯಾಹ್ನ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು.










