ಚಿಕ್ಕಮಗಳೂರು :ಜಿಲ್ಲೆಯಲ್ಲಿ ಕಾಫಿ ಉದ್ಯಮದ ಅಭಿವೃದ್ದಿಗೆ ತಮ್ಮ ಅವಧಿಯಲ್ಲಿ ಕೇಂದ್ರ ಸರ್ಕಾರದಿಂದ 20 ಕೋಟಿ ರೂ ಅನುದಾನ ಒದಗಿಸಲಾಗಿದೆ ಎಂದು ಕಾಫಿ ಮಂಡಳಿ ಸದಸ್ಯ ಕೆ.ಕೆ.ಮನುಕುಮಾರ್ ಹೇಳಿದ್ದಾರೆ.
ಈ ಹಣದಲ್ಲಿ 16.78 ಕೋಟಿ ರೂಗಳನ್ನು 16,250 ಸಣ್ಣ ಬೆಳೆಗಾರರಿಗೆ ಮರುನಾಟಿ, ವಿಸ್ತೀರ್ಣ, ನೀರು ಸಂಗ್ರಹಣೆ, ಗುಣಮಟ್ಟ ಕಾಯ್ದುಕೊಳ್ಳಲು ಯಂತ್ರಗಳ ಖರೀದಿಗೆ ಸಬ್ಸಿಡಿ ನೀಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತೋಟ ಕಾರ್ಮಿಕರ 1991 ಮಕ್ಕಳಿಗೆ ಕಾರ್ಮಿಕರ ಕಲ್ಯಾಣ ನಿಧಿ ಯೋಜನೆಯಡಿ ಶಿಕ್ಷಣಕ್ಕಾಗಿ 72 ಲಕ್ಷ ರೂ ಸಹಾಯ ಧನ ನೀಡಲಾಗಿದೆ, 1149 ಸಣ್ಣ ಬೆಳೆಗಾರರಿಗೆ ಸಾಲ ಮರುಪಾವತಿಸಲು 2.50 ಕೋಟಿ ಪ್ರೋತ್ಸಾಹ ಧನ ನೀಡಲಾಗಿದೆ ಎಂದು ಹೇಳಿದ್ದಾರೆ.
ಕಾಫಿ ಬೆಳೆಗಾರರು ಮತ್ತು ರೈತರು ಬಳಸುವ ಲಘು ಸಾರಿಗೆ ವಾಹನಗಳಿಗೆ ಕಟ್ಟುವ ವಿಮಾ ಕಂತಿನ ಪ್ರೀಮಿಯಂ ಹಣದ ಪ್ರಮಾಣವನ್ನು ಕಡಿತಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ, ಅತ್ಯುತ್ತಮ ಕಾಫಿ ಸ್ಪರ್ಧೆಯಲ್ಲಿ ಭಾಗವಹಿಸಲು ಸಣ್ಣಬೆಳೆಗಾರರಿಗೆ ಈ ಹಿಂದೆ ಇದ್ದ ನಿಬಂಧನೆಗಳನ್ನು ಸಡಿಲಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಾಫಿ ಬೆಳೆಗಾರರ ಮಕ್ಕಳಿಗೆ ಕಾಫಿ ವ್ಯಾಪಾರೋದ್ಯಮದ ತರಬೇತಿ ನೀಡಲು ಬೆಂಗಳೂರಿನಲ್ಲಿ ತರಬೇತಿ ಕೇಂದ್ರ ತೆರೆಯಲಾಗಿದೆ, ಕಾಫಿ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮತ್ತು ಗ್ರಾಹಕರಿಗೆ ಉತ್ತಮ ಕಾಫಿಯನ್ನು ಒದಗಿಸಲು ವ್ಯಾಪಾರಸ್ಥರಿಗೆ ಶೇ. 70 ಕಾಫಿ ಮತ್ತು ಶೇ. 30 ರಷ್ಟು ಚಿಕೋರಿ ಬೆರೆಸುವ ಮಾನದಂಡವನ್ನು ನಿಗದಿಪಡಿಸಲು ಚಿಂತನೆ ನಡೆಸಲಾಗಿದೆ ಎಂದಿದ್ದಾರೆ.
ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ವ್ಯಾಪ್ತಿಗೆ ಸಣ್ಣ ಬೆಳೆಗಾರರ ತೋಟ ನಿರ್ವಹಣೆಯ ಕೆಲವು ಕಾಮಗಾರಿಗಳನ್ನು ಸೇರ್ಪಡೆಗೊಳಿಸುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿದೆ, ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯನ್ನು ಕಾರ್ಯಗತಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಗೆ ನಾಲ್ಕು ಕಾಫಿ ಸೇವನಾ ಕೇಂದ್ರಗಳು ಮಂಜೂರಾಗಿದ್ದು, ಅವುಗಳನ್ನು ಕೆಮ್ಮಣ್ಣುಗುಂಡಿ, ಬಾಬಾಬುಡನ್ ಗಿರಿ ಕ್ರಾಸ್, ಸೀತಾಳಯ್ಯನಗಿರಿ, ಹಿರೇಕೊಳಲೆ ಕೆರೆ ಮತ್ತು ನಗರದ ತಾಲ್ಲೂಕು ಕಛೇರಿ ಆವರಣದಲ್ಲಿ ಸದ್ಯದಲ್ಲೇ ತೆರೆಯಲಾಗುವುದು ಎಂದು ಹೇಳಿದ್ದಾರೆ.
ರೈತರಿಗೆ ನೀಡುತ್ತಿರುವ ಮಾದರಿಯಲ್ಲಿ ಸಣ್ಣಬೆಳೆಗಾರರ ಪಂಪ್ ಸೆಟ್ಟುಗಳಿಗೂ ಉಚಿತ ವಿದ್ಯುತ್ ಸಂಪರ್ಕವನ್ನು ಕಲ್ಪಿಸುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ, ಆಯುಷ್ಮಾನ್ ಭಾರತ್ ಯೋಜನೆಗೆ ಸಣ್ಣಬೆಳೆಗಾರರು ಮತ್ತು ತೋಟ ಕಾರ್ಮಿಕರ ಕುಟುಂಬವನ್ನು ಸೇರ್ಪಡೆಗೊಳಿಸುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದಿದ್ದಾರೆ.
ಬಿಳಿಗಿರಿ ರಂಗನ ಬೆಟ್ಟದಲ್ಲಿರುವ ಸೋಲಿಗರಿಗೆ ನೀಡಿರುವ ಮಾದರಿಯಲ್ಲಿ ಶೃಂಗೇರಿ ಮತ್ತು ಮೂಡಿಗೆರೆ ತಾಲ್ಲೂಕಿನ ಗಿರಿಜನರಿಗೂ ಕಾಫಿ ಮಂಡಳಿ ಮತ್ತು ರಾಜ್ಯ ಸರ್ಕಾರದಿಂದ ಸಮಗ್ರ ಕಾಫಿ ಅಭಿವೃದ್ದಿ ಯೋಜನೆಯನ್ನು ರೂಪಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.
Home ಸ್ಥಳಿಯ ಸುದ್ದಿ ಕೃಷಿ ಸಿಂಚಾಯಿ ಯೋಜನೆಯನ್ನು ಕಾರ್ಯಗತಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಗಿದೆ:ಕೆ.ಕೆ.ಮನುಕುಮಾರ್…










