ಇಂದಿನ ಯುವಪೀಳಿಗೆ ದೇಶಿಯ ಕಲೆ, ಸಾಹಿತ್ಯ, ಮತ್ತು ಸಂಗೀತದತ್ತ ಮುಖ ಮಾಡಿದರೆ ಮಾತ್ರ ಅವು ಮುಂದಿನ ಪೀಳಿಗೆಗೆ ಉಳಿಯುತ್ತವೆ: ಸಿ.ಪಿ.ಸುರೇಶ್…

318
firstsuddi

ಚಿಕ್ಕಮಗಳೂರು:ಇಂದಿನ ಯುವಪೀಳಿಗೆ ಪಾಶ್ಚಾತ್ಯ ಸಂಸ್ಕøತಿಯ ವ್ಯಾಮೋಹವನ್ನು ಬಿಟ್ಟು ದೇಶಿಯ ಕಲೆ, ಸಾಹಿತ್ಯ, ಸಂಗೀತ ಮತ್ತು ಸಂಸ್ಕøತಿಯತ್ತ ಹೊರಳಬೇಕು ಎಂದು ಲಯನ್ಸ್ ಅಧ್ಯಕ್ಷ ಸಿ.ಪಿ.ಸುರೇಶ್ ಸಲಹೆ ಮಾಡಿದರು.ಮನೋರಂಜನಿ ಸಂಗೀತ ಮಹಾವಿದ್ಯಾಲಯ ನಗರದ ಲಯನ್ಸ್ ಸೇವಾ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮನೋರಂಜನಿ ಸಂಗೀತೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದಿನ ಯುವಪೀಳಿಗೆ ಪಾಶ್ಚಾತ್ಯ ಸಂಸ್ಕøತಿಯ ದಾಸರಾಗಿರುವುದರಿಂದಾಗಿ ನಮ್ಮ ಕಲೆ, ಸಾಹಿತ್ಯ, ಸಂಗೀತದ ಕಾರ್ಯಕ್ರಮಗಳಿಗೆ ಪ್ರೇಕ್ಷಕರ ಕೊರತೆ ಕಾಡುತ್ತಿದೆ ಇದರಿಂದಾಗಿ ದೇಶೀಯ ಕಲೆ ಜನಮಾನಸದಿಂದ ಮರೆಯಾಗುತ್ತಿದೆ ಎಂದು ವಿಷಾದಿಸಿದರು.
ಇಂದಿನ ಯುವಪೀಳಿಗೆ ಪಾಶ್ಚಾತ್ಯ ಸಂಸ್ಕøತಿಯ ವ್ಯಾಮೋಹದಿಂದ ಹೊರಬಂದು ನಮ್ಮ ಕಲೆ, ಸಾಹಿತ್ಯ, ಸಂಗೀತದತ್ತ ಮುಖ ಮಾಡಿದರೆ ಮಾತ್ರ ಅವು ಮುಂದಿನ ಪೀಳಿಗೆಗೆ ಉಳಿಯುತ್ತವೆ ಎಂದರು.
ಸಂಗೀತ ಮನಸ್ಸಿನ ರೆಕ್ಕೆ, ವಿಶ್ವದ ಆತ್ಮ ಅದನ್ನು ಆಲಿಸುವುದರಿಂದ ಮನಸ್ಸಿನ ಒತ್ತಡ, ದುಗುಡ ನಿವಾರಣೆಯಾಗುತ್ತದೆ, ಮಾನಸಿಕ ಶಾಂತಿ, ನೆಮ್ಮದಿ ದೊರೆಯುತ್ತದೆ, ಪಾಶ್ಚಾತ್ಯ ಸಂಗೀತ ಮನಸ್ಸನ್ನು ಕೆರಳಿಸಿದರೆ ಕರ್ನಾಟಕ ಶಾಸ್ತ್ರೀಯ ಸಂಗೀತ ಮನಸ್ಸನ್ನು ಅರಳಿಸುತ್ತದೆ ಎಂದರು.
ಲಯನೆಸ್ ಅಧ್ಯಕ್ಷೆ ಲಕ್ಷ್ಮೀ ನಂಜಯ್ಯ ಮಾತನಾಡಿ ಸಾರ್ವಜನಿಕರು ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಬಂದು ವೀಕ್ಷಿಸಿ ಪ್ರೋತ್ಸಾಹಿಸಿದರೆ ಮಾತ್ರ ಕಲೆ ಮತ್ತು ಕಲಾವಿದರು ಉಳಿಯುತ್ತಾರೆ ಎಂದು ತಿಳಿಸಿದರು.
ಮನೋರಂಜನಿ ಸಂಗೀತ ಮಹಾವಿದ್ಯಾಲಯದ ಸಂಸ್ಥಾಪಕ ಬಿ.ಸಿ.ಜಯರಾಮ್ ಮಾತನಾಡಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಮುಂದಿನ ತಲೆಮಾರಿಗೆ ಉಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ದಾಸ ಸಾಹಿತ್ಯ ಪ್ರಾಜೆಕ್ಟ್‍ನ ಮಹಿಳೆಯರಿಂದ ಭಜನೆ ನಡೆಯಿತು, ಮನೋರಂಜನಿ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಶ್ರೀ ತ್ಯಾಗರಾಜರ ಪಂಚರತ್ನ ಕೃತಿಯ ಗೋಷ್ಠಿಗಾಯನ ಜರುಗಿತು.
ಮನೋರಂಜನಿ ಸಂಗೀತ ಮಹಾವಿದ್ಯಾಲಯದ ಪ್ರಾಂಶುಪಾಲೆ ಅಪರ್ಣಾ ಜಯರಾಮ್ ಉಪಸ್ಥಿತರಿದ್ದರು, ಸಮಾರಂಭದ ನಂತರ ಗಮಕಿ ಶಶಿಕಲಾ ಶಿವಶಂಕರ್ ಅವರಿಂದ ಗಮಕ ವಾಚನ, ಸಾಹಿತಿ ರಾಮಸುಬ್ರಾಯ ಶೇಟ್ ಅವರಿಂದ ವ್ಯಾಖ್ಯಾನ ನಡೆಯಿತು.
ಬೆಂಗಳೂರಿನ ವಿದುಷಿ ವೈ.ಜಿ.ಶ್ರೀಲತಾ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕಛೇರಿ ಜರುಗಿತು.