ಟಿಪ್ಪು ಸುಲ್ತಾನ್ ಬಗ್ಗೆ ಇರುವ ಪರ ಮತ್ತು ವಿರೋಧದ ಬಗ್ಗೆ ರಾಜ್ಯ ಸರ್ಕಾರ ರಾಜ್ಯ ಮಟ್ಟದಲ್ಲಿ ವೈಜ್ಞಾನಿಕ ಚರ್ಚಾ ಗೋಷ್ಠಿಯನ್ನು ಏರ್ಪಡಿಸಬೇಕು: ಹೆಚ್.ಹೆಚ್.ದೇವರಾಜ್…

545
firstsuddi

ಚಿಕ್ಕಮಗಳೂರು:ಟಿಪ್ಪು ಸುಲ್ತಾನ್ ಬಗ್ಗೆ ಪ್ರಸ್ತುತ ಎದ್ದಿರುವ ಭಿನ್ನಾಭಿಪ್ರಾಯ ಮತ್ತು ಗೊಂದಲಗಳನ್ನು ನಿವಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತಜ್ಞರ ಸಮಿತಿಯೊಂದನ್ನು ರಚಿಸಬೇಕು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹೆಚ್.ಹೆಚ್.ದೇವರಾಜ್ ಸಲಹೆ ಮಾಡಿದರು.
ನಗರದ ಜೆಡಿಎಸ್ ಕಛೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ರಾಜ್ಯ ಸರ್ಕಾರ ರಚಿಸುವ ತಜ್ಞರ ಸಮಿತಿ ಟಿಪ್ಪುಸುಲ್ತಾನ್ ಬಗ್ಗೆ ಎದ್ದಿರುವ ಭಿನ್ನಾಭಿಪ್ರಾಯಗಳನ್ನು, ಗೊಂದಲಗಳನ್ನು ಪರಿಶೀಲಿಸಬೇಕು, ಇತಿಹಾಸವನ್ನು ಕೂಲಂಕುಷವಾಗಿ ಅಧ್ಯಯನ ಮಾಡಿ ಸತ್ಯ ಸಂಗತಿಯನ್ನು ರಾಜ್ಯದ ಜನತೆಗೆ ತಿಳಿಸಬೇಕು ಎಂದು ಹೇಳಿದರು.ಟಿಪ್ಪು ಸುಲ್ತಾನ್ ಬಗ್ಗೆ ಇರುವ ಪರ ಮತ್ತು ವಿರೋಧದ ಬಗ್ಗೆ ರಾಜ್ಯ ಸರ್ಕಾರ ರಾಜ್ಯ ಮಟ್ಟದಲ್ಲಿ ವೈಜ್ಞಾನಿಕ ಚರ್ಚಾ ಗೋಷ್ಠಿಯನ್ನು ಏರ್ಪಡಿಸಬೇಕು ಎಂದರು.
ಸ್ವಾತಂತ್ರ್ಯ ಪ್ರೇಮಿ ಟಿಪ್ಪು ಸುಲ್ತಾನ್ ಅವರನ್ನು ದೇಶದ್ರೋಹಿ ಮತ್ತು ಮತಾಂಧನೆಂದು ರಾಜಕಾರಣಕ್ಕಾಗಿ ಬಿಂಬಿಸುತ್ತಿರುವುದು ದುರಂತ ಎಂದ ಅವರು ಟಿಪ್ಪುವಿನ ಸಾಧನೆಯನ್ನು ಗುರುತಿಸಿ ಅಂದಿನ ಮೈಸೂರು ಮಹಾರಾಜರು ಆತನಿಗೆ ಮೈಸೂರು ಹುಲಿ ಎಂದು ಬಿರುದು ನೀಡಿ ಗೌರವಿಸಿದ್ದಾರೆ, ಜಿಲ್ಲೆಯ ಶೃಂಗೇರಿ ಮಠವನ್ನು ರಕ್ಷಿಸಿದ ಕೀರ್ತಿ ಟಿಪ್ಪುವಿಗಿದೆ, ಅನೇಕ ಮಠ ಮಂದಿರಗಳಿಗೆ ಆತ ಉದಾರವಾಗಿ ಕೊಡುಗೆ ನೀಡಿದ್ದಾನೆ ಎಂದು ಹೇಳಿದರು.
ಜಯಂತಿ ಪ್ರಯುಕ್ತ ಟಿಪ್ಪು ಸುಲ್ತಾನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು, ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು.
ಜೆಡಿಎಸ್ ಅಲ್ಪ ಸಂಖ್ಯಾತ ವಿಭಾಗದ ಅಧ್ಯಕ್ಷ ನಿಸಾರ್ ಅಹಮದ್, ರಾಜ್ಯ ಸಂಘಟನಾ ಕಾರ್ಯದರ್ಶಿ ರವಿಕುಮಾರ್, ಮಾಜಿ ಜಿಲ್ಲಾಧ್ಯಕ್ಷ ಮಂಜಪ್ಪ, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಚಂದ್ರಪ್ಪ, ಫೈರೋಜ್, ಧರ್ಮರಾಜ್, ದೇವರಾಜ್ ಉಪಸ್ಥಿತರಿದ್ದರು.