ರಾಷ್ಟ್ರದ ಅಭಿವೃದ್ದಿಗೆ ಮತದಾನ ಪ್ರಕ್ರಿಯೆ ಅತ್ಯಂತ ಪ್ರಮುಖವಾದುದು: ಡಾ|| ಹೆಚ್.ಪಿ. ಮಂಜುಳಾ ಹುಲ್ಲಹಳ್ಳಿ…

187
firstsuddi

ಚಿಕ್ಕಮಗಳೂರು : ದೇಶದ ಪ್ರಗತಿಯ ದೃಷ್ಠಿಯಿಂದ ಯುವಜನತೆ ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಡಾ|| ಹೆಚ್.ಪಿ. ಮಂಜುಳಾ ಹುಲ್ಲಹಳ್ಳಿ ಸಲಹೆ ಮಾಡಿದರು.
ನೆಹರು ಯುವಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಹಿರೇಗೌಜದ ಡಾ|| ಬಿ.ಆರ್.ಅಂಬೇಡ್ಕರ್ ಯುವ ವೇದಿಕೆ ನಗರದ ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇತ್ತೀಚಿನ ವರ್ಷಗಳಲ್ಲಿ ಜನತೆ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವುದು ಕಡಿಮೆಯಾಗುತ್ತಿದೆ ಅದರಲ್ಲೂ ಯುವಜನತೆ ಮತದಾನದತ್ತ ನಿರಾಸಕ್ತಿ ತೋರುತ್ತಿರುವುದು ದೇಶದ ಪ್ರಗತಿಗೆ ಮಾರಕವಾಗಿದೆ ಎಂದು ವಿಷಾದಿಸಿದ ಅವರು ರಾಷ್ಟ್ರದ ಅಭಿವೃದ್ದಿಗೆ ಮತದಾನ ಪ್ರಕ್ರಿಯೆ ಅತ್ಯಂತ ಪ್ರಮುಖವಾದುದು ಎಂದರು.
ದೇಶದ ಅಭಿವೃದ್ದಿಯಲ್ಲಿ ಯುವಜನತೆಯ ಜವಾಬ್ದಾರಿ ಹೆಚ್ಚಿದೆ, ಅದನ್ನು ಸ್ವಯಂ ಪ್ರೇರಿತರಾಗಿ ಮತದಾನ ಮಾಡುವ ಮೂಲಕ ಅವರು ನಿಭಾಯಿಸಬೇಕು, ತಾವು ಮತ ಚಲಾಯಿಸುವುದರ ಜೊತೆಗೆ ಉಳಿದವರ ಮನವೊಲಿಸಿ ಅವರೂ ಸಹ ಮತದಾನ ಮಾಡುವಂತೆ ನೋಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಭಾರತ ಸೇವಾದಳದ ತಾಲ್ಲೂಕು ಅಧ್ಯಕ್ಷ ಬಿ.ಆರ್.ಜಗದೀಶ್ ಮಾತನಾಡಿ ಕ್ರೀಡಾಕೂಟಗಳಲ್ಲಿ ಯುವಜನತೆ ಸೋಲನ್ನು ಸವಾಲಾಗಿ ಸ್ವೀಕರಿಸಬೇಕು ಎಂದು ಸಲಹೆ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ನೆಹರು ಯುವಕೇಂದ್ರದ ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಜೆಸಿಂತಾ ಡಿಸೋಜ ಗ್ರಾಮೀಣ ಯುವಜನತೆಯಲ್ಲಿ ಕ್ರೀಡಾಸಕ್ತಿ ಬೆಳೆಸುವ ಉದ್ದೇಶದಿಂದ ಈ ಕ್ರೀಡಾ ಕೂಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಕುರಿತು ಕ್ರೀಡಾ ಪಟುಗಳಿಗೆ ಇದೇ ವೇಳೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು, ಅಂಬೇಡ್ಕರ್ ಯುವ ವೇದಿಕೆಯ ಕಾರ್ಯದರ್ಶಿ ಹೆಚ್.ಬಿ.ಅವಿನಾಶ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಕೆ.ಪಿ.ಶಶಿಧರ್, ಐಡಿಎಸ್‍ಜಿ ಕಾಲೇಜಿನ ಪ್ರಾಂಶುಪಾಲ ಪ್ರೊ|| ಟಿ.ಸಿ.ಬಸವರಾಜ್, ದೈಹಿಕ ಶಿಕ್ಷಣ ನಿರ್ದೇಶಕ ಬಿ.ಯೋಗೀಶ್, ನೆಹರು ಯುವಕೇಂದ್ರದ ಸಿ.ಆರ್.ಉಷಾ, ಚೈತ್ರ, ಕ್ರೀಡಾಪಟು ಪ್ರದೀಪ್ ಶೆಟ್ಟಿ, ನಿವೃತ್ತ ಉಪನ್ಯಾಸಕ ಶಿವಮೂರ್ತಿ, ಅಂಬೇಡ್ಕರ್ ಯುವವೇದಿಕೆಯ ಅಧ್ಯಕ್ಷ ಹೆಚ್.ಎಲ್.ರವಿಚಂದ್ರ, ಉಪಾಧ್ಯಕ್ಷ ಹೆಚ್.ಪಿ.ರಂಜಿತ್, ಖಜಾಂಚಿ ದಿಲೀಪ್, ಕ್ರೀಡಾ ಕಾರ್ಯದರ್ಶಿ ಹೆಚ್.ಆರ್.ಮಂಜುನಾಥ್ ಉಪಸ್ಥಿತರಿದ್ದರು.
ಜಿಲ್ಲೆಯ ವಿವಿಧ ತಾಲ್ಲೂಕುಗಳ ನೂರಕ್ಕೂ ಹೆಚ್ಚು ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.