ಶ್ರೀನಗರ : ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ನಡೆದ ಎರಡು ಪ್ರತ್ಯೇಕ ಎನ್‍ಕೌಂಟರ್‍ನಲ್ಲಿ ಭದ್ರತಾ ಪಡೆಗಳು ಓರ್ವ ಉಗ್ರನನ್ನು ಹೊಡೆದುರುಳಿಸಿದ್ದು, ಓರ್ವ ಯೋಧ ಹುತಾತ್ಮರಾಗಿದ್ದಾರೆ. ಜಮ್ಮು ಕಾಶ್ಮೀರಾದ ಪುಲ್ವಾಮ ಜಿಲ್ಲೆಯ ಅವಂತಿಪೊರಾದ ಟ್ರಾಲ್ ಪ್ರದೇಶದಲ್ಲಿ ಉಗ್ರರು ಹಾಗೂ ಯೋಧರ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಯೋಧರು ಓರ್ವ ಉಗ್ರನನ್ನು ಹೊಡೆದುರುಳಿಸಿದ್ದು, ಉಗ್ರನ ಬಳಿ ಇದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ ಮದ್ದು ಗುಂಡುಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಉಗ್ರರಿಗಾಗಿ ಶೋಧಕಾರ್ಯಾಚರಣೆ ಮುಂದುವರೆದಿದೆ.
ಹಾಗೆಯೇ ಬುಡ್ಗಾಮ್ ಜಿಲ್ಲೆಯಲ್ಲಿ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಎನ್‍ಕೌಂಟರ್ ನಡೆದಿದ್ದು, ಈ ವೇಳೆ ಉಗ್ರರ ಗುಂಡಿನ ದಾಳಿಗೆ ಸಿ.ಆರ್.ಪಿ.ಎಫ್ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಬುಡ್ಗಾಮ್ ಜಿಲ್ಲೆಯ ಕೈಸರ್‍ಮುಲ್ಲಾದ 117 ಬೆಟಾಲಿಯನ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಉಗ್ರರ ಗುಂಡಿನ ದಾಳಿಯಿಂದ ತೀವ್ರ ಗಾಯಗೊಂಡಿದ್ದರು. ಬಳಿಕ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮರಾಗಿದ್ದಾರೆ. ಉಗ್ರರು ಯೋಧನ ಮೇಲೆ ಗುಂಡಿನ ದಾಳಿ ನಡೆಸಿ ಯೋಧನ ಬಳಿ ಇದ್ದ ಸರ್ವಿಸ್ ರೈಫಲ್‍ನ್ನು ಕಿತ್ತುಕೊಂಡು ಹೋಗಿದ್ದು, ಘಟನಾ ಸ್ಥಳದಲ್ಲಿ ಉಗ್ರರಿಗಾಗಿ ಶೋಧಕಾರ್ಯ ಮುಂದುವರೆದಿದೆ ಎಂದು ಸೇನಾ ಮೂಲಗಳಿಂದ ತಿಳಿದು ಬಂದಿದೆ.










