ಲಂಡನ್ : ಎರಡು ಡೋಸ್ ಕೋವಿಶೀಲ್ಡ್ ಅಥವಾ ಯುಕೆ ಅನುಮೋದಿತ ಲಸಿಕೆ ಪಡೆದು ಯುಕೆಗೆ ಆಗಮಿಸುವ ಭಾರತೀಯರು ಅ.11ರಿಂದ ಕ್ವಾರಂಟೈನ್ ಗೆ ಒಳಪಡುವ ಅಗತ್ಯ ಇಲ್ಲ ಎಂದು ಯುಕೆ ಹೈಕಮಿಷನ್ ವಕ್ತಾರರು ತಿಳಿಸಿದ್ದಾರೆ.
ಈ ಕುರಿತಂತೆ ಟ್ವೀಟರ್ ನಲ್ಲಿ ಮಾಹಿತಿ ನೀಡಿರುವ ಬ್ರಿಟಿಷ್ ಹೈ ಕಮೀಷನರ್ ಅಲೆಕ್ಸ್ ಎಲ್ಲಿಸ್ ಅವರು, ಕೋವಿಶೀಲ್ಡ್ ಅಥವಾ ಯುಕೆ ಅನುಮೋದಿತ ಸಂಪೂರ್ಣ ಲಸಿಕೆ ಪಡೆದ ಭಾರತೀಯ ಪ್ರಯಾಣಿಕರಿಗೆ ಅಕ್ಟೋಬರ್ 11ರಿಂದ ನಿರ್ಬಂಧಿಸಲಾಗುವುದಿಲ್ಲ. ಕಳೆದ ತಿಂಗಳಿಂದ ಸಹಕರಿಸಿದ ಭಾರತ ಸರ್ಕಾರಕ್ಕೆ ಧನ್ಯವಾದ ಎಂದಿದ್ದಾರೆ.
ಅ.11ರ ಮುಂಚೆ ಮತ್ತು ಲಸಿಕೆ ಪಡೆಯದ ಪ್ರಯಾಣಿಕರು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಆದರೆ ಅಕ್ಟೋಬರ್ 11ರ ಬಳಿಕ ಆಗಮಿಸುವವರು ಸಂಪೂರ್ಣ ಲಸಿಕೆ ಪಡೆದಿರುವ ಪ್ರಮಾಣ ಪತ್ರವನ್ನು ಪರಿಗಣಿಸಲಾಗುವುದು. ಸಾರ್ವಜನಿಕ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸಚಿವಾಲಯಗಳ ನಡುವಿನ ನಿಕಟ ತಾಂತ್ರಿಕ ಸಹಕಾರದ ನಂತರ ಈ ನಿರ್ಧಾರ ಪ್ರಕಟಿಸಿದ್ದೇವೆ ಎಂದು ಭಾರತದ ಬ್ರಿಟಿಷ್ ಹೈ ಕಮೀಷನರ್ ತಿಳಿಸಿದ್ದಾರೆ.










