ಬೆಂಗಳೂರು : ಅಕ್ರಮ ಆಸ್ತಿ ಗಳಿಕೆ ಪ್ರಕರಣದಡಿ ಆರೋಪಿ ಎಸ್ಪಿ ಶ್ರೀನಿವಾಸ್ ಐಯ್ಯರ್ ಗೆ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1998ರ ಅಡಿ ನಾಲ್ಕು ವರ್ಷ ಜೈಲು ಶಿಕ್ಷೆ ಹಾಗೂ ಒಂದು ಕೋಟಿ ರೂಪಾಯಿ ದಂಡ ವಿಧಿಸಿ ಸಿಸಿಹೆಚ್ 78ನೇ ನ್ಯಾಯಾಲಯದ ನ್ಯಾಯಾಧೀಶರಾದ ಎಸ್.ವಿ.ಶ್ರೀಕಾಂತ್ ತೀರ್ಪು ನೀಡಿದ್ದಾರೆ. ಅಲ್ಲದೇ ದಂಡ ಪಾವತಿಸುವಲ್ಲಿ ವಿಫಲರಾದರೆ ಹೆಚ್ಚುವರಿಯಾಗಿ 2 ವರ್ಷ ಸಾದಾ ಸಜೆ ಅನುಭವಿಸಬೇಕೆಂದು ಹೇಳಿದ್ದಾರೆ.
2007ರಲ್ಲಿ ಯಲಹಂಕದ ಸಶಸ್ತ್ರ ಪೊಲೀಸ್ ತರಬೇತಿ ಶಾಲೆಯ ಎಸ್ ಪಿಯಾಗಿ ಶ್ರೀನಿವಾಸ್ ಕಾರ್ಯನಿರ್ವಹಿಸುತ್ತಿದ್ದಾಗ ಅವರ ಮನೆ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ತಮ್ಮ ಆದಾಯ ಮೂಲಗಳಿಗಿಂತ ಶೇ.53ರಷ್ಟು ಆಸ್ತಿ ಸಂಪಾದನೆ ಮಾಡಿರುವುದು ದಾಳಿ ವೇಳೆ ಕಂಡುಬಂದಿತ್ತು. ಈ ಸಂಬಂಧ ಭ್ರಷ್ಟಾಚಾರ ಪ್ರಕರಣ ದಾಖಸಿಕೊಂಡು ತನಿಖೆ ನಡೆಸಿದ ಪೊಲೀಸರು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆದಿದ್ದು, ನ್ಯಾಯಾಲಯ ಶ್ರೀನಿವಾಸ್ ಐಯ್ಯರ್ ಗೆ ಶಿಕ್ಷೆ ಪ್ರಕಟಿಸಿದೆ.










