ಅಟ್ಟಪಾಡಿ ಮಧು ಹತ್ಯೆ ಪ್ರಕರಣ – 13 ಅಪರಾಧಿಗಳಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ…

110
firstsuddi

ಪಾಲಕ್ಕಾಡ್ : ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಕೇರಳದ ಪಾಲಕ್ಕಾಡ್ ಜಿಲ್ಲೆಯ ಅಟ್ಟಪಾಡಿ ಮಧು ಹತ್ಯೆ ಪ್ರಕರಣದಲ್ಲಿ 14 ಆರೋಪಿಗಳನ್ನು ದೋಷಿಗಳೆಂದು ನಿನ್ನೆ ತೀರ್ಪು ನೀಡಿದ್ದ ಮಣ್ಣಾರ್ ಕ್ಕಾಡ್ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿಶೇಷ ನ್ಯಾಯಾಲಯ ಇಂದು 13 ಅಪರಾಧಿಗಳಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ಒಂದು ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.

ಘಟನೆ ನಡೆದ ಐದು ವರ್ಷಗಳ ಬಳಿಕ ನ್ಯಾಯಾಲಯ ಪ್ರಕರಣದ ಕುರಿತು ತೀರ್ಪು ನೀಡಿದೆ. ಮಧು ಕೊಲೆ ಪ್ರಕರಣದಲ್ಲಿ ಒಟ್ಟು 16 ಮಂದಿ ಆರೋಪಿಗಳಿದ್ದು, 4ನೇ ಮತ್ತು 11ನೇ ಆರೋಪಿಗಳನ್ನು ಖುಲಾಸೆಗೊಳಿಸಲಾಗಿತ್ತು. ಇಂದು ಉಳಿದ 14 ಮಂದಿ ಅಪರಾಧಿಗಳಲ್ಲಿ 13 ಮಂದಿಗಷ್ಟೇ ನ್ಯಾಯಧೀಶ ಕೆ ಎಂ ರತೀಶ್ ಕುಮಾರ್ ಶಿಕ್ಷೆ ವಿಧಿಸಿದ್ದಾರೆ. 16ನೇ ಆರೋಪಿ ಮುನೀರ್ ಈ ಪ್ರಕರಣದಲ್ಲಿ ಮೂರು ತಿಂಗಳ ಜೈಲು ಶಿಕ್ಷೆ ಅನುಭವಿಸಿದ್ದು, ದಂಡವನ್ನು ಈಗಾಗಲೇ ಪಾವತಿಸಿರುವುದರಿಂದ ಮುಂದೆ ಶಿಕ್ಷೆ ಅನುಭವಿಸಬೇಕಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಏನಿದು ಪ್ರಕರಣ?
2018ರ ಫೆ.22ರಂದು ಅಟ್ಟಪಾಡಿ ಚಿಂಡೇರಿ ಊರಿನ ಮಲ್ಲನ್ ಮತ್ತು ಮಲ್ಲಿ ದಂಪತಿಯ ಪುತ್ರ ಮಧು (30) ಗುಂಪು ದಾಳಿಗೆ ಬಲಿಯಾಗಿದ್ದರು. ಮಾನಸಿಕ ಅಸ್ವಸ್ಥನಾಗಿದ್ದ ಮಧು ತನ್ನ ಕುಟುಂಬದಿಂದ ದೂರವಾಗಿ ಕಾಡಿನ ಗುಹೆಯಲ್ಲಿ ವಾಸಿಸುತ್ತಿದ್ದ. ಜನರ ಗುಂಪೊಂದು ಮಧುವನ್ನು ಕಳ್ಳ ಎಂದು ಆರೋಪಿಸಿ ಕಾಡಿನಿಂದ ಹಿಡಿದು ಮುಕ್ಕಾಲಿಗೆ ಕರೆತಂದಿತ್ತು. ಮಧುವನ್ನು ಮುಕ್ಕಾಲಿ ಸಮೀಪದ ಕಾಡಿನೊಳಗಿಂದ ಹಿಡಿದು ಆರೋಪಿಗಳು ಅಮಾನುಷವಾಗಿ ಥಳಿಸಿದ್ದರು. ಮುಕ್ಕಾಲಿಗೆ ತಲುಪಿದ ಪೊಲೀಸರು ಮಧುವನ್ನು ವಶಕ್ಕೆ ತೆಗೆದುಕೊಂಡಿದ್ದರು. ಅಗಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯುವಷ್ಟರಲ್ಲಿ ಮಧು ಮೃತಪಟ್ಟಿದ್ದಾನೆ.