ಅತ್ಯಾಚಾರಿಗಳ ಬಿಡುಗಡೆ ಪ್ರಶ್ನಿಸಿ ಸುಪ್ರೀಂಗೆ ಬಿಲ್ಕಿಸ್ ಬಾನೋ ಮೇಲ್ಮನವಿ…

57
firstsuddi

ನವದೆಹಲಿ: 2002ರ ಗುಜರಾತ್ ಗಲಭೆ ವೇಳೆ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ 11 ಅಪರಾಧಿಗಳ ಬಿಡುಗಡೆ ಪ್ರಶ್ನಿಸಿ  ಬಿಲ್ಕಿಸ್ ಬಾನೋ ಇಂದು ಸುಪ್ರೀಂ ಕೋರ್ಟ್‍ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ.

ಅಪರಾಧಿಗಳನ್ನು ಬಿಡುಗಡೆ ಮಾಡುವ ಬಗ್ಗೆ ಮಹಾರಾಷ್ಟ್ರ ಸರ್ಕಾರ ತೀರ್ಮಾನಿಸಬೇಕಿತ್ತೇ ಹೊರತು ಗುಜರಾತ್ ಅಲ್ಲ ಎಂದು ಬಿಲ್ಕಿಸ್ ಬಾನೋ ತನ್ನ ಅರ್ಜಿಯಲ್ಲಿ ಹೇಳಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ಪೀಠದ ಮುಂದೆ ಬಾನೋ ಪರ ವಕೀಲೆ ಶೋಭಾ ಗುಪ್ತಾ ಅವರು ಈ ವಿಷಯವನ್ನು ಪ್ರಸ್ತಾಪಿಸಿದರು. ನ್ಯಾಯಮೂರ್ತಿ ಅಜಯ್ ರಸ್ತೋಗಿ ಅವರು ಈಗ ಸಂವಿಧಾನ ಪೀಠದ ಭಾಗವಾಗಿರುವುದರಿಂದ ಈ ವಿಷಯವನ್ನು ಆಲಿಸುವ ಸಾಧ್ಯತೆಗಳು ಕಡಿಮೆ ಎಂದು ಗುಪ್ತಾ ವಾದಿಸಿದರು.

ಮರು ಪರಿಶೀಲನಾ ಅರ್ಜಿಯನ್ನು ಮೊದಲು ಆಲಿಸಬೇಕು ಮತ್ತು ಅದು ನ್ಯಾಯಮೂರ್ತಿ ರಸ್ತೋಗಿ ಅವರ ಮುಂದೆ ವಿಚಾರಣೆಗೆ ಬರಲಿ ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ಹೇಳಿದರು.

ಈ ವಿಷಯವನ್ನು ತೆರೆದ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕು ಎಂದು ಗುಪ್ತಾ ಮನವಿ ಮಾಡಿದರು. ಇದನ್ನು ನ್ಯಾಯಾಲಯ ಮಾತ್ರ ನಿರ್ಧರಿಸಬಹುದು ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ, ಅರ್ಜಿಯನ್ನು ಪರಿಶೀಲಿಸಿದ ನಂತರ ಪಟ್ಟಿ ಮಾಡುವ ಬಗ್ಗೆ ನಿರ್ಧರಿಸುವುದಾಗಿ ತಿಳಿಸಿದ್ದಾರೆ.

1992ರ ಕ್ಷಮಾಪಣಾ ನೀತಿ ಅನ್ವಯ 11 ಅಪರಾಧಿಗಳ ಬಿಡುಗಡೆಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದ ನಂತರ ಗುಜರಾತ್ ಸರ್ಕಾರ ಕಳೆದ ಆಗಸ್ಟ್ 15 ಸ್ವಾತಂತ್ರ್ಯ ದಿನದಂದು 11 ಮಂದಿ ಅಪರಾಧಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಿತ್ತು. ಈ ಕ್ರಮವು ದೇಶಾದ್ಯಂತ ಭಾರೀ ಆಕ್ರೋಶವನ್ನು ಹುಟ್ಟುಹಾಕಿತ್ತು.