ಮುಂಬೈ : ಬಾಲಿವುಡ್ ಸ್ಟಾರ್ ಜೋಡಿಯಾದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆ ಅದ್ದೂರಿಯಾಗಿ ನೆರವೇರಿದೆ. ಡಿ.9ರಂದು(ನಿನ್ನೆ) ಈ ಜೋಡಿ ಹಸೆಮಣೆ ಏರಿದೆ. ಮದುವೆ ಬಳಿಕ ಕತ್ರಿನಾ ಮತ್ತು ವಿಕ್ಕಿ ಕೌಶಲ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದು, ಅವು ಈಗ ಸಖತ್ ವೈರಲ್ ಆಗುತ್ತಿವೆ.
ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಹೋಟೆಲ್ ನಲ್ಲಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆ ನೆರವೇರಿದೆ. ವೈರಲ್ ಆದ ಚಿತ್ರಗಳಲ್ಲಿ ವಿಕ್ಕಿ ಕೌಶಲ್ ಬಂಗಾರದ ಬಣ್ಣದ ದಿರಿಸು ಧರಿಸಿದ್ದರೆ, ಕತ್ರಿನಾ ಕೆಂಪು ಲೆಹೆಂಗಾದಲ್ಲಿ ಮಿರಿ ಮಿರಿ ಮಿಂಚುತ್ತಿದ್ದಾರೆ.
ಈ ಮದುವೆಗೆ ಆಪ್ತರನ್ನು ಮಾತ್ರ ಆಹ್ವಾನಿಸಲಾಗಿದ್ದು, ಅತಿಥಿಗಳಿಗೆ ನೋ ಫೋಟೋ ನಿಯಮ ವಿಧಿಸಲಾಗಿತ್ತು. ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮದುವೆಯ ವಿಡಿಯೋಗಳನ್ನು ಖ್ಯಾತ ಓಟಿಟಿ ಸಂಸ್ಥೆಯೊಂದಕ್ಕೆ ಬರೋಬ್ಬರಿ 100 ಕೋಟಿ ರೂ. ಮೊತ್ತಕ್ಕೆ ಮಾರಾಟ ಮಾಡಲಾಗಿದೆ ಎಂಬ ಸುದ್ದಿ ಕೇಳಿಬಂದಿದೆ. ಇದಕ್ಕಾಗಿ ಮದುವೆ ಸಮಾರಂಭದ ಚಿತ್ರ, ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳದಂತೆ ನಿರ್ಬಂಧ ಹೇರಲಾಗಿದೆ ಎಂದು ಹೇಳಲಾಗ್ತಿದೆ.
ನಿಮ್ಮಿಬ್ಬರ ಜೀವನಪೂರ್ತಿ ಪ್ರೀತಿ, ನಗು, ನಿಷ್ಠೆ, ಗೌರವ ಇರಲಿ ಶುಭಾಶಯಗಳು ಎಂದು ದೀಪಿಕಾ ಪಡುಕೋಣೆ ಕಾಮೆಂಟ್ ಮಾಡಿದ್ದಾರೆ. ನೀವು ತುಂಬಾನೇ ಮುದ್ದಾಗಿ ಕಾಣೀಸುತ್ತಿದ್ದೀರ ಎಂದು ನಟಿ ಆಲಿಯಾ ಭಟ್ ಕೂಡಾ ಕಾಮೆಂಟ್ ಮಾಡುವ ಮೂಲಕವಾಗಿ ಶುಭಕೋರಿದ್ದಾರೆ. ಹೀಗೆ ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಸೋಶಿಯಲ್ ಮೀಡಿಯಾ ಮೂಲಕ ಈ ಜೋಡಿಗೆ ಶುಭಾಶಯಗಳ ಸುರಿಮಳೆ ಗೈದಿದ್ದಾರೆ.










