ಬೆಂಗಳೂರು : ಅಪಾರ್ಟ್ ಮೆಂಟ್ ನ 12 ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ನಗರದ ಹುಳಿಮಾವು ನಲ್ಲಿ ನಿನ್ನೆ ನಡೆದಿದೆ.
ವೈಷ್ಣವಿ(13) ಮೃತ ದುರ್ದೈವಿ. ಖಾಸಗಿ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಬಾಲ್ಕನಿಯಲ್ಲಿ ಆಟವಾಡುತ್ತಿದ್ದಾಗ ಕೆಳಗೆ ಬಿದ್ದು ಈ ಅವಘಡ ಸಂಭವಿಸಿದೆ. ವೈಷ್ಣವಿ ಉತ್ತರಪ್ರದೇಶ ಮೂಲದ ವೀರೇಂದ್ರಕುಮಾರ್ ಹಾಗೂ ಸುಮನ್ ದಂಪತಿಯ ಪುತ್ರಿ. ಈ ದಂಪತಿ ಕಳೆದ 20 ವರ್ಷದಿಂದ ಹುಳಿಮಾವುನ ವೇಣುಗೋಪಾಲ ನಗರದ ನಿತೀಶ್ ಪಾರ್ಕ್ ಅಪಾರ್ಟ್ಮೆಂಟ್ ನಲ್ಲಿ ವಾಸಿಸುತ್ತಿದ್ದಾರೆ.
ರಾತ್ರಿ ಕುಟುಂಬದವರ ಜೊತೆ ಕುಳಿತು ಊಟ ಮಾಡಿದ ವೈಷ್ಣವಿ ಬಾಲ್ಕನಿಯಲ್ಲಿ ಲಾಕ್ ಮಾಡಿಕೊಂಡು ಆಟವಾಡುತ್ತಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ. ಏನೋ ಬಿದ್ದ ರೀತಿ ಶಬ್ದ ಕೇಳಿದ ಕುಟುಂಬಸ್ಥರು ಬಾಲ್ಕನಿ ಬಳಿ ಹೋಗಿ ನೋಡಿದ್ದಾರೆ. ಆದರೆ ಅಲ್ಲಿ ವೈಷ್ಣವಿ ಕೆಳಗೆ ಬಿದ್ದಿದ್ದು ಕಂಡಿದೆ. ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವದಿಂದ ಸ್ಥಳದಲ್ಲೇ ವೈಷ್ಣವಿ ಮೃತಪಟ್ಟಿದ್ದಾಳೆ.
ಘಟನೆ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರ ತನಿಖೆಯ ಬಳಿಕವಷ್ಟೇ ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ತಿಳಿಯಬೇಕಿದೆ.










