ತಿರುವನಂತಪುರಂ : ಅಪ್ರಾಪ್ತ ಅತ್ಯಾಚಾರ ಸಂತ್ರಸ್ತೆಯ 28 ವಾರಗಳ ಗರ್ಭಾವಸ್ಥೆಯನ್ನು ವೈದ್ಯಕೀಯವಾಗಿ ಗರ್ಭಪಾತ ಮಾಡಿಸಲು ಅನುಮತಿ ನೀಡುವ ಮೂಲಕ ಕೇರಳ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಸಂತ್ರಸ್ತೆಯನ್ನು ಪರೀಕ್ಷಿಸಿದ ವೈದ್ಯಕೀಯ ಮಂಡಳಿಯ ವರದಿಯನ್ನು ಆಧರಿಸಿ ಗರ್ಭಾವಸ್ಥೆಯ ವೈದ್ಯಕೀಯ ಮುಕ್ತಾಯಕ್ಕೆ (ಎಂಟಿಪಿ) ಹೈಕೋರ್ಟ್ ಅನುಮತಿ ನೀಡಿತು. ಅತ್ಯಾಚಾರದಿಂದ ಅಪ್ರಾಪ್ತೆ ಗರ್ಭ ಧರಿಸಿದರೆ ಆ ಗರ್ಭಧಾರಣೆಯಿಂದ ಆಕೆ ಬಹಳ ದುಃಖ ಪಡಬೇಕಾಗುತ್ತದೆ. ಈ ನೋವು ಆಕೆಯ ಮನಸಿನ ಮೇಲೆ ಗಂಭೀರವಾದ ಗಾಯವನ್ನು ಉಂಟುಮಾಡಬಹುದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಆಗಸ್ಟ್ 12 ರಂದು ನ್ಯಾಯಾಲಯದ ಆದೇಶದ ಮೇರೆಗೆ ವೈದ್ಯಕೀಯ ಮಂಡಳಿಯನ್ನು ರಚಿಸಲಾಗಿತ್ತು. ವೈದ್ಯಕೀಯ ಮಂಡಳಿಯ ಶಿಫಾರಸಿನ ಮೇರೆಗೆ ನ್ಯಾಯಾಲಯವು ಎಂಟಿಪಿಗೆ ಅನುಮತಿ ನೀಡಿದೆ. ವೈದ್ಯಕೀಯ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಬಾಲಕಿಯ ಜೀವಕ್ಕೆ ಎದುರಾಗಬಹುದಾದ ಯಾವುದೇ ಅಪಾಯಕ್ಕೆ ಜವಾಬ್ದಾರಿ ವಹಿಸಿಕೊಳ್ಳುವುದಾಗಿ ಅಫಿಡವಿಟ್ ಸಲ್ಲಿಸುವಂತೆ ಪ್ರಕರಣದಲ್ಲಿ ಅರ್ಜಿದಾರರಾಗಿರುವ ಸಂತ್ರಸ್ತ ಬಾಲಕಿಯ ತಾಯಿಗೆ ಕೋರ್ಟ್ ಸೂಚಿಸಿತು.
ವೈದ್ಯಕೀಯ ಪ್ರಕ್ರಿಯೆಯ ನಂತರ ಭ್ರೂಣವು ಜೀವಂತವಾಗಿದ್ದರೆ, ಹುಟ್ಟುವ ಮಗುವಿಗೆ ಲಭ್ಯವಿರುವ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆಯನ್ನು ನೀಡಲಾಗುವ ಬಗ್ಗೆ ಮತ್ತು ಮಗು ಆರೋಗ್ಯಕರವಾಗಿ ಬೆಳೆಯುವಂತೆ ಆಸ್ಪತ್ರೆಯು ಜವಾಬ್ದಾರಿಯನ್ನು ವಹಿಸಿಕೊಳ್ಳಲಿದೆ. ಅರ್ಜಿದಾರರು ಮಗುವಿನ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಿದ್ಧರಿಲ್ಲದಿದ್ದರೆ, ರಾಜ್ಯ ಮತ್ತು ಅದರ ಇಲಾಖೆಗಳು ಮಗುವಿನ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು, ಮಗುವಿಗೆ ವೈದ್ಯಕೀಯ ಬೆಂಬಲ ಮತ್ತು ಸೌಲಭ್ಯಗಳನ್ನು ನೀಡಲಿವೆ ಎಂದು ನ್ಯಾಯಾಲಯ ಹೇಳಿದೆ.










