ನವದೆಹಲಿ: ಇಲ್ಲಿನ ಅಲಿಪುರದ ಮಾರುಕಟ್ಟೆಯಲ್ಲಿರುವ ಬಣ್ಣದ ಕಾರ್ಖಾನೆಯೊಂದರಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಪರಿಣಾಮ 11 ಮಂದಿ ಕಾರ್ಮಿಕರು ಸಜೀವ ದಹನವಾದ ಘಟನೆ ನಡೆದಿದೆ.
ನಿನ್ನೆ ದೆಹಲಿಯ ಅಲಿಪುರದ ಮಾರುಕಟ್ಟೆಯಲ್ಲಿರುವ ಪೇಂಟ್ ಫ್ಯಾಕ್ಟರಿಯಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿತ್ತು. ಕೂಡಲೇ ಸುಮಾರು 7-8 ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಲು ಆಗಮಿಸಿದ್ದವು. ಈ ಅಪಘಾತದಲ್ಲಿ ಮೃತಪಟ್ಟವರ ಗುರುತು ಇನ್ನೂ ಪತ್ತೆಯಾಗಿಲ್ಲ. ಮೃತರ ದೇಹಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಅವರನ್ನು ಗುರುತಿಸುವುದೂ ಕಷ್ಟವಾಗುತ್ತಿದೆ ಎಂದು ದೆಹಲಿ ಅಗ್ನಿಶಾಮಕ ಸೇವೆಯ ನಿರ್ದೇಶಕ ಅತುಲ್ ಗಾರ್ಗ್ ತಿಳಿಸಿದ್ದಾರೆ.
ಅಗ್ನಿ ಅವಘಡಕ್ಕೂ ಮುನ್ನ ಕಾರ್ಖಾನೆಯಲ್ಲಿ ಸ್ಫೋಟದ ಸದ್ದು ಕೇಳಿಬಂದಿದ್ದು, ಅಲ್ಲಿ ಸಂಗ್ರಹಿಸಿಡಲಾಗಿದ್ದ ರಾಸಾಯನಿಕಗಳಿಂದ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬೆಂಕಿಯ ಜ್ವಾಲೆ ಪಕ್ಕದ ಮನೆ ಹಾಗೂ ಮುಕ್ತಿ ಕೇಂದ್ರಕ್ಕೂ ಹಬ್ಬಿದೆ. ಸ್ಫೋಟ ಸಂಭವಿಸಿದ ಪರಿಣಾಮ ಕಟ್ಟಡ ಕುಸಿದು ಬಿದ್ದಿದ್ದು, 11 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ.
ಇನ್ನೂ ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.










