ಬೆಂಗಳೂರು : ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಿಜೆಪಿ ಅಧಿಕೃತವಾಗಿ ಆ ಮಹಾನಾಯಕ ಯಾರೆಂಬುದನ್ನು ಟ್ವೀಟ್ ಮಾಡುವ ಮೂಲಕ ಬಹಿರಂಗಪಡಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ ಈ ಘಟನೆಯ ಹಿಂದೆ ಒಬ್ಬ ಜೈಲಿನಿಂದ ಜಾಮೀನಿನ ಮೇಲೆ ಹೊರಗಡೆ ಬಂದಿರುವ ಭ್ರಷ್ಟಾಚಾರಿ ಆರೋಪಿ ಮಹಾ ನಾಯಕನ ಕೈವಾಡ ಇದೆ ಎಂಬ ಸುದ್ದಿ ಇದೆ. ಆ ಮಹಾನಾಯಕ ಕೂಡಾ ತನ್ನನ್ನು ಸಿಲುಕಿಸುವ ಕುತಂತ್ರ ನಡೆಯುತ್ತಿದೆ ಎಂದು ಹೇಳುವ ಮೂಲಕ ಹೆಗಲು ಮುಟ್ಟಿ ನೋಡಿಕೊಂಡಿದ್ದಾರೆ ಎಂದು ಬರೆದುಕೊಂಡಿದ್ದು, ಅಲ್ಲದೇ ರಾಹುಲ್ ಗಾಂಧಿ ಏಕೆ ಸುಕನ್ಯಾ ದೇವಿಯ ಪರವಾಗಿ ಒಮ್ಮೆಯೂ ಧ್ವನಿ ಎತ್ತಿಲ್ಲ ಎಂದು ಬಿಜೆಪಿ ಪ್ರಶ್ನೆ ಮಾಡಿದೆ.
ಇತ್ತೀಚೆಗಷ್ಟೇ ಶಿವಮೊಗ್ಗದಲ್ಲಿ ಮಾತನಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸಿಡಿ ವಿಚಾರದಲ್ಲಿ ಬಿಜೆಪಿಯವರು ನನ್ನನ್ನು ಸಿಲುಕಿಸಲು ನೋಡಿದ್ದಾರೆ. ಬಿಜೆಪಿಯವರು ಮಾಡಬಾರದ್ದನ್ನು ಮಾಡಿಕೊಂಡು ಈಗ ಆ ಆರೋಪವನ್ನು ನಮ್ಮ ಮೇಲೆ ಹೊರಿಸಲು ಪ್ರಯತ್ನ ಮಾಡಿದ್ದಾರೆ. ಆದರೆ ನಾನು ಯಾರಿಗೂ ಹೆದರುವ ಮಗನಲ್ಲ ಎಂದು ಗುಡುಗಿದ್ದರು.
ಇನ್ನು ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣ ಕುರಿತು ನಡೆಯಲಿರುವ ಎಸ್.ಐ.ಟಿ. ತನಿಖೆ ಸರಿದಾರಿಯಲ್ಲಿ ನಡೆಯಬೇಕು. ಈ ಬಗ್ಗೆ ನಾವು ಕೂಡ ಗಮನ ಹರಿಸುತ್ತೆವೆ. ಬಿಜೆಪಿ ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಂಡು ನಮ್ಮ ಶಾಸಕರ ಮೇಲೆ ಕೇಸು ಹಾಕಿದೆ. ಇರಲಿ ಕಾಲವೇ ಉತ್ತರ ಕೊಡುತ್ತೆ.. ಟೈಂ ಬಂದಾಗ ಎಲ್ಲಾ ಬಿಚ್ಚಿಡ್ತೀನಿ ಎಂದು ವಾಗ್ದಾಳಿ ನಡೆಸಿದ್ದರು.










